

ಪಡುಬಿದ್ರಿ: ಹೆಮ್ಮೆಯ ತುಳುನಾಡಿನಲ್ಲಿ ದೈವ, ದೇವರ ಹಿರಿಮೆ, ಗರಿಮೆಗಳೊಂದಿಗೆ ತುಳುವರ ಆಚರಣೆಗಳೂ ಭದ್ರಬುನಾದಿ ಹೊಂದಿವೆ. ಆಟಿ ಮಾನವನ ಆಯಷ್ಯ, ಭವಿಷ್ಯವನ್ನು ಉದ್ದೀಪನಗೊಳಿಸುವ ತಿಂಗಳು. ಈ ತಿಂಗಳ ಖಾದ್ಯ, ರಸಗಳು ನಮ್ಮ ಆರೋಗ್ಯವರ್ಧಕ ಮಾಸವಾಗಿ ಪ್ರಸಿದ್ಧವಾಗಿದೆ ಎಂದು ಶಿರ್ವ ಮಹಿಳಾ ಮಂಡಲ ಅಧ್ಯಕ್ಷೆ ಸ್ಫೂರ್ತಿ ಪಿ.ಶೆಟ್ಟಿ ಹೇಳಿದರು.
ಪಡುಬಿದ್ರಿ ಬಂಟರ ಸಂಘ, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಹಾಗೂ ಬಂಟರ ಮಹಿಳಾ ವಿಭಾಗ ಪಡುಬಿದ್ರಿಯಲ್ಲಿ ಭಾನುವಾರ ಆಟಿದ ಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶೀಲಾ ಕೆ.ಶೆಟ್ಟಿ ಹಾಗೂ ನಳಿನಿ ಆರ್.ಹೆಗ್ಡೆ ಚೆನ್ನೆಮಣೆ ಆಟದೊಂದಿಗೆ ಕಾರ್ಯಕ್ರಮಕ್ಕೆ ಕಳೆಯಿತ್ತರು. ಕೆಸರುಗದ್ದೆ ಕೂಟ ಸಂಘಟಿಸಿದ ಸಂತೋಷ್ ಜೆ. ಶೆಟ್ಟಿ ಬರ್ಪಾಣಿ ಅವರನ್ನು ಗೌರವಿಸಲಾಯಿತು. ಉಡುಪಿ ಜಿಪಂ ಮಾಜಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಬಂಟ್ಸ್ ವೆಲ್ಫೆೇರ್ ಟ್ರಸ್ಟ್ ಅಧ್ಯಕ್ಷ ವೈ.ಶಶಿಧರ ಶೆಟ್ಟಿ, ಸಿರಿಮುಡಿ ದತ್ತಿನಿಧಿ ಸ್ಥಾಪಕ ಸಾಂತೂರು ಭಾಸ್ಕರ ಶೆಟ್ಟಿ, ಬಂಟರ ಸಂಘ ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ ಬಂಟರ ಮಹಿಳಾ ವಿಭಾಗ ಅಧ್ಯಕ್ಷೆ ಜ್ಯೋತಿ ಎಸ್.ಶೆಟ್ಟಿ, ವಾಣಿ ರವಿ ಶೆಟ್ಟಿ, ರಶ್ಮಿ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.