ಕಾರ್ಕಳ: ಇಲ್ಲಿನ ಬೈಪಾಸ್ ರಸ್ತೆಯಲ್ಲಿರುವ ಫ್ಲಾೃಟ್‌ವೊಂದರ ಮಹಡಿಯಲ್ಲಿ ಶನಿವಾರ ತಡರಾತ್ರಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮಹಿಳೆ ಗಾಯಗೊಂಡಿದ್ದಾರೆ.ಉದಯ ಕೋಟ್ಯಾನ್ ಫ್ಲಾಟ್‌ನ ನಾಲ್ಕನೇ ಮಹಡಿಯಲ್ಲಿ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ರಾತ್ರಿ 11.30ರ ವೇಳೆ ಸ್ಫೋಟಗೊಂಡಿದೆ. ಸಿಲಿಂಡರ್‌ನಲ್ಲಿ ಸೋರಿಕೆಯಿದ್ದು, ಜತೆಗೆ ದೀಪವೂ ಸಿಲಿಂಡರ್ ಸಮೀಪವೇ ಇದ್ದದ್ದರಿಂದ ಸ್ಫೋಟಗೊಂಡಿದೆ ಎನ್ನಲಾಗಿದೆ. ಇದರಿಂದ ಬೆಂಕಿ ಆವರಿಸಿಕೊಂಡಿದ್ದು, ಪೀಠೋಪಕರಣ ಸಹಿತ ಫ್ಲಾಟ್ ಒಳಗಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಸ್ಫೋಟದ ತೀವ್ರತೆಗೆ ಹಲವು ಫ್ಲಾಟ್‌ಗಳ ಕಿಟಕಿ ಗಾಜುಗಳು ಒಡೆದು ರಸ್ತೆಗೆ ಬಿದ್ದಿವೆ. ಫ್ಲಾಟ್ ಒಳಗಿದ್ದ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಮೀಪದ ಫ್ಲಾಟ್‌ಗಳಿಗೂ ಬೆಂಕಿ ವ್ಯಾಪಿಸಿತ್ತು. ಸ್ಥಳಕ್ಕೆ ಅಗ್ನಿಶಾಮಕ ದಳದ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್ ಹಾಗೂ ತಂಡ ಆಗಮಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಅಚ್ಯುತ್ ಕರ್ಕೇರ, ಸುರೇಶ್ ಕುಮಾರ, ಜಯಮೂಲ್ಯ, ನಿತ್ಯಾನಂದ, ರವಿಚಂದ್ರ ಭಾಗವಹಿಸಿದ್ದರು.