ಹಣೆಗೆ ಪಿಸ್ತೂಲ್ ಗುರಿ ಇಟ್ಟು, ಸುಟ್ಟು ಬಿಡುತ್ತೇನೆಂದು ಬೆದರಿಸಿದ!; ಎಸ್ಐ ವಿರುದ್ಧ ಆರೋಪ

Kng_Police
Published on

ಕುಣಿಗಲ್: ಹಣೆಗೆ ಪಿಸ್ತೂಲ್ ಗುರಿ ಇಟ್ಟು, ಸುಟ್ಟುಬಿಡುತ್ತೇನೆ ಎಂದು ಪಿಎಸ್​ಐ ಪ್ರಾಣ ಬೆದರಿಕೆ ಹಾಕಿದ್ದಾರೆಂದು ಆರೋಪ ಹೊರಿಸಿ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಡಿ.ವಿ.ಹನುಮಂತು ಕುಣಿಗಲ್ ಡಿವೈಎಸ್‌ಪಿ, ವೃತ್ತ ನಿರೀಕ್ಷಕರಿಗೆ ದೂರುನೀಡಿದ್ದಾರೆ.

ತಾಲೂಕಿನ ಟಿ.ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡಮಾವತ್ತೂರಿನಲ್ಲಿ ಡಿ.ವಿ ಹನುಮಂತು ಎಂಬುವವರ ಮೇಲೆ ಹುಲಿಯೂರುದುರ್ಗ ಪಿಎಸ್​ಐ ವೆಂಕಟೇಶ್ ಹಾಗೂ ಪೊಲೀಸ್ ಸಿಬ್ಬಂದಿ ಇಂದು ಸಂಜೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ.

ದೊಡ್ಡಮಾವತ್ತೂರು ಗ್ರಾಮದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಡಿ.ವಿ.ಹನುಮಂತು ಸ್ಫರ್ಧೆಯ ಚಿನ್ಹೆ ಪಡೆದು ಸಂಜೆ ಮನೆಗೆ ವಾಪಸಾಗುವಾಗ ದೊಡ್ಡಮಾವತ್ತೂರು ಟೋಲ್ ಹತ್ತಿರ ಕ್ರಷರ್ ಮಾಲೀಕರು ಹಾಗೂ ರೈತರ ನಡುವೆ ನಡೆಯುತ್ತಿದ್ದ ವಾಗ್ವಾದ ನೋಡುತ್ತ ನಿಂತಿದ್ದವರ ಮೇಲೆ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ವೆಂಕಟೇಶ್ ಹಾಗೂ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಗಾಯಗೊಂಡಿರುವ ಹನುಮಂತು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶಾಸಕ ಡಾ.ಎಚ್.ಡಿ.ರಂಗನಾಥ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಜನಸಾಮಾನ್ಯರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ರಾಕ್ಷಸೀ ಪ್ರವೃತ್ತಿ ತಾಳಿ ಹಲ್ಲೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ದೌರ್ಜನ್ಯವನ್ನು ಖಂಡಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net