ಹೆಂಡತಿಯನ್ನೇ ಪಣಕ್ಕಿಟ್ಟ, ಜೂಜಾಟದಲ್ಲಿ ಸೋತು ಸ್ನೇಹಿತರ ಸುಖಕ್ಕೆ ಕೊಟ್ಟ, ಒಪ್ಪದ್ದಕ್ಕೆ ಪತ್ನಿ ಮೇಲೆ ಆ್ಯಸಿಡ್ ಸುರಿದುಬಿಟ್ಟ..!

Crime 16 April 20
Published on

ಪಾಟ್ನಾ: ಮಹಾಭಾರತದಲ್ಲಿ ಪಾಂಡವರು ದ್ರೌಪದಿಯನ್ನು ಪಣಕ್ಕಿಟ್ಟು ಪಗಡೆಯಾಡಿದ್ದನ್ನು ನೆನಪಿಸುವಂಥ ಘಟನೆ ಇದು. ಆದರೆ ಇದು ಕಲಿಯುಗವಾದ್ದರಿಂದ ಈ ಘಟನೆ ಇನ್ನೂ ಘೋರವಾಗಿದೆ. ಇಲ್ಲೊಬ್ಬ ಹೆಂಡತಿಯನ್ನೇ ಪಣಕ್ಕಿಟ್ಟು ಜೂಜಾಡಿ, ಸೋತು ಸ್ನೇಹಿತರ ಲೈಂಗಿಕ ಸುಖಕ್ಕೆ ಕೊಟ್ಟಿದ್ದಲ್ಲದೆ, ಅದಕ್ಕೊಪ್ಪದ ಪತ್ನಿ ಮೇಲೆ ಆ್ಯಸಿಡ್ ಸುರಿದು ಬಿಟ್ಟಿದ್ದಾನೆ.

ಬಿಹಾರದ ಭಗಲ್​ಪುರ ಜಿಲ್ಲೆಯಲ್ಲಿ ಇಂಥದ್ದೊಂದು ವಿಕೃತ ಘಟನೆ ಸಂಭವಿಸಿದೆ. ಪ್ರಕರಣ ಸಂಬಂಧ ಆರೋಪಿ ಸೋನು ಹರಿಜನ್​ ಎಂಬಾತನನ್ನು ಬಂಧಿಸಿದ್ದು, ಆತನ ವಿರುದ್ಧ ಭಾನುವಾರ ಸಂಜೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೊಝಾಹಿದ್​ಪುರ ಠಾಣೆ ಪೊಲೀಸ್ ಅಧಿಕಾರಿ ರಾಜೇಶ್​ ಕುಮಾರ್ ಝಾ ತಿಳಿಸಿದ್ದಾರೆ. ಇದು ಅತಿಸೂಕ್ಷ್ಮ ಪ್ರಕರಣವಾಗಿರುವುದರಿಂದ ನಾವು ತ್ವರಿತವಾಗಿ ಕೇಸು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೇವೆ. ತನಿಖೆ ಮುಂದುವರಿದಿದ್ದು, ಉಳಿದ ಆರೋಪಿಗಳನ್ನೂ ಶೀಘ್ರದಲ್ಲೇ ಬಂಧಿಸುವುದಾಗಿ ಅವರು ತಿಳಿಸಿದ್ದಾರೆ.

ಒಂದೂವರೆ ತಿಂಗಳ ಹಿಂದೆ ಸೋನು ತನ್ನ ಹೆಂಡತಿಯನ್ನು ಪಣಕ್ಕಿಟ್ಟು ಜೂಜಾಡಿದ್ದಾನೆ. ಸೋತರೆ ಒಂದು ತಿಂಗಳ ಮಟ್ಟಿಗೆ ಹೆಂಡತಿಯನ್ನು ಗೆದ್ದವರ ಮನೆಗೆ ಕಳುಹಿಸಿಕೊಡುವುದಾಗಿ ಪಣತೊಟ್ಟಿದ್ದ. ಸೋತ ಕಾರಣ ಆತ ಗೆದ್ದ ಗೆಳೆಯರ ಲೈಂಗಿಕ ಸುಖಕ್ಕಾಗಿ ಹೆಂಡತಿಯನ್ನು ಒಪ್ಪಿಸಿದ್ದ. ಆದರೆ ಎರಡು-ಮೂರು ಬಾರಿ ಹೋದ ಅವಳು ಮತ್ತೆ 'ಅದಕ್ಕೆ' ಒಪ್ಪಲಿಲ್ಲ. ಇದರಿಂದ ಸಿಟ್ಟಾದ ಆತ ಪತ್ನಿ ಮೇಲೆ ಆ್ಯಸಿಡ್ ಸುರಿದಿದ್ದ. ಆಕೆಯ ದೇಹದ ಹಲವೆಡೆ ಸುಟ್ಟು ಹೋಗಿದ್ದು, ನೋವು ಸಹಿಸಲಾಗದ ಆಕೆ ಗಂಡನ ಮನೆಯಿಂದ ಲೋದಿಪುರದಲ್ಲಿರುವ ತನ್ನ ತಂದೆಯ ಮನೆಗೆ ಹೋಗಿ, ನಡೆದಿದ್ದೆಲ್ಲವನ್ನೂ ಹೇಳಿದ್ದಳು. ಆಕೆಯ ಪಾಲಕರು ತಕ್ಷಣ ಲೋದಿಪುರ ಠಾಣೆಗೆ ಹೋಗಿ ದೂರು ಹೇಳಿದ್ದು, ಅಲ್ಲಿನ ಪೊಲೀಸರು ಪ್ರಕರಣ ನಡೆದ ಸ್ಥಳ ತಮ್ಮ ವ್ಯಾಪ್ತಿಗೆ ಬರದ್ದರಿಂದ ಮುಝಾಹಿದ್​ಪುರ ಠಾಣೆಗೆ ದೂರು ನೀಡಲು ಹೇಳಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net