

ಬೆಂಗಳೂರು: ಬರುವ ನವೆಂಬರ್ನಿಂದ ನಗರದಲ್ಲಿ ಹಾಳಾದ 459 ಕಿ.ಮೀ. ಉದ್ದದ ರಸ್ತೆಗಳನ್ನು 659 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. 2025ರ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಗುರಿ ಹಾಕಿಕೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ ನಗರ ಪ್ರದಕ್ಷಿಣೆ ನಡೆಸಿದ ಬಳಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ, ನಗರವನ್ನು ರಸ್ತೆಗುಂಡಿ ಮುಕ್ತವನ್ನಾಗಿಸಲು ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ. ಬೆಂಗಳೂರು ನಗರದಲ್ಲಿ ಅಂದಾಜು 12,878 ಕಿ.ಮೀ. ಉದ್ದದ ರಸ್ತೆ ಜಾಲವಿದೆ. ಈ ಪೈಕಿ ಅಂದಾಜು 13,44 ಕಿ.ಮೀ. ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆ ಗುಂಪಿಗೆ ಸೇರಲಿವೆ. ಉಳಿದ ರಸ್ತೆಗಳು ವಲಯ ಮಟ್ಟದ ವ್ಯಾಪ್ತಿಗೆ ಬರಲಿವೆ. ರಸ್ತೆ ಗುಂಡಿ ಗಮನ ಆ್ಯಪ್ನಲ್ಲಿ ಈವರೆಗೆ 1,376 ಗುಂಡಿ ಮುಚ್ಚಲಾಗಿದೆ. 2,684 ರಸ್ತೆ ಗುಂಡಿಗಳ ತ್ವರಿತ ದುರಸ್ತಿಗೆ ಕ್ರಮವಹಿಸಲಾಗಿದೆ. ಸೆ.20ರೊಳಗೆ ಎಲ್ಲ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿಗೆ ಗುಡುವು ನೀಡಲಾಗಿದೆ ಎಂದಿದ್ದಾರೆ.
ಬೆಸ್ಕಾಂ, ಕೆಪಿಟಿಸಿಎಲ್ ಕೇಬಲ್, ನೀರು ಸರಬರಾಜು, ಒಳಚರಂಡಿ ಕೊಳವೆಗಳು, ಗೇಲ್ ಗ್ಯಾಸ್ನ ಕೊಳವೆಗಳು ಒಎಫ್ಸಿ ಕೇಬಲ್ಗಳ ಅಳವಡಿಕೆಯಿಂದ ರಸ್ತೆಯ ಮೇಲ್ಮೆ ಭಾಗ ಶಿಥಿಲಗೊಂಡು ರಸ್ತೆ ಗುಂಡಿ ಬೀಳುತ್ತಿರುವುದು ಗಮನಕ್ಕೆ ಬಂದಿದೆ. ಇವುಗಳ ದುರಸ್ತಿಗೆ ಬಿಬಿಎಂಪಿಯು ಸ್ಥಾಪಿಸಿರುವ ಡಾಂಬಾರು ಮಿಕ್ಸ್ ಘಟಕದಿಂದ ಆರ್ಟಿರಿಯಲ್, ಸಬ್ಆರ್ಟಿರಿಯಲ್ ರಸ್ತೆ ಗುಂಡಿ ಮುಚ್ಚಲಾಗುತ್ತಿದೆ. ಪ್ರತಿ ವಾರ್ಡ್ಗೆ 15 ಲಕ್ಷ ರೂ. ಅನುದಾನವನ್ನು ರಸ್ತೆ ಗುಂಡಿ ಮುಚ್ಚಲು ಬಿಡುಗಡೆ ಮಾಡಲಾಗಿದೆ. ಮಳೆಗಾಲದಲ್ಲಿಯೂ ರಸ್ತೆ ಗುಂಡಿ ಮುಚ್ಚಲು ತಂಪಾದ ಡಾಂಬರ್ ಮಿಶ್ರಣ ಟಕ ಸ್ಥಾಪಿಸಲಾಗಿದೆ. 2023&24ನೇ ಸಾಲಿನಲ್ಲಿ 1,700 ಕೋಟಿ ರೂ. ಅನುದಾನವನ್ನು ವೈಟ್ ಟಾಪಿಂಗ್ ಕಾಮಗಾರಿ ನಡೆಸಲು ಅನುಮೋದನೆ ನೀಡಲಾಗಿದೆ ಎಂದು ಸಿಎಂ ವಿವರಿಸಿದ್ದಾರೆ.
ಕೇಬಲ್, ಒಳಚರಂಡಿ ಕೊಳವೆ, ಒಎಫ್ಸಿ ಕೇಬಲ್ಗಳ ಅಳವಡಿಕೆಗಾಗಿ ಯಾರೂ ರಸ್ತೆ ಅಗೆಯುತ್ತಾರೋ ಅವರೇ ರಸ್ತೆಗುಂಡಿ ಮುಚ್ಚಬೇಕೆಂದು ಆದೇಶಿಸಲಾಗಿದೆ. ಈ ಮೂಲಕ ರಸ್ತೆ ಗುಂಡಿ ಸೃಷ್ಟಿಸದಂತೆ ಕಡಿವಾಣ ಹಾಕಲಾಗಿದೆ. ಜಲಮಂಡಳಿ ಸೇರಿ ಇತರೆ ಇಲಾಖೆಗಳು ಪರಸ್ಪರ ಸಮನ್ವಯತೆ ಸಾಧಿಸುವಂತೆ ಸೂಚಿಸಲಾಗಿದೆ. ರಸ್ತೆ ಅಗೆಯುವ, ರಸ್ತೆದುರಸ್ತಿ ಪ್ರಕ್ರಿಯೆಯನ್ನು ಕ್ರಮ ಬದ್ಧಗೊಳಿಸಲಾಗಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ