ಶಿವಮೊಗ್ಗ: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿದೇಶಗಳಲ್ಲಿ ಭಾರತದ ಮಾನ ಹರಾಜು ಹಾಕುತ್ತಿದ್ದಾರೆ. ನಮ್ಮ ಕಡುವೈರಿ ಚೀನಾವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೊಗಳುತ್ತಿದ್ದಾರೆ. ಅವರು ಭಾರತದ ಪ್ರತಿಪಕ್ಷ ನಾಯಕನಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಮೋಹನ್ ವಿಶ್ವ ಕಿಡಿಕಾರಿದರು.
ದೇಶದಲ್ಲಿ ಸಮಸ್ಯೆಗಳಿರಬಹುದು. ಅದನ್ನು ಇಲ್ಲಿಯೇ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಬಿಟ್ಟು ಅಮೆರಿಕದಲ್ಲಿ ಪ್ರಸ್ತಾಪ ಮಾಡುವುದರಿಂದ ಭಾರತದ ಗೌರವ ಕಡಿಮೆಯಾಗುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಂತೆ ರಾಹುಲ್ ಗಾಂಧಿ ವರ್ತಿಸುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಪದೇಪದೆ ಸಂವಿಧಾನದ ಬಗ್ಗೆ ಉಪದೇಶ ಮಾಡುವ ರಾಹುಲ್ ಗಾಂಧಿ ಸಂವಿಧಾನವನ್ನು ಮೀರಿ ದೇಶವನ್ನು ತೆಗಳುತ್ತಾರೆ. ಅವರ ವರ್ತನೆ ಅನುಮಾನಾಸ್ಪದ. ಅವರ ಉದ್ದೇಶ ಏನು ಎಂಬುದು ಸ್ಪಷ್ಟವಾಗುತ್ತಿದೆ. ಹಲವಾರು ಬಾರಿ ಈ ವರ್ತನೆ ತೋರಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮನಸ್ಥಿತಿ: ಮೀಸಲಾತಿ ತೆಗೆದು ಹಾಕಬೇಕೆಂದು ರಾಹುಲ್ ಗಾಂಧಿ ಹೇಳಿದ್ದಾರೆ. ಚುನಾವಣೆ ಪೂರ್ವದಲ್ಲಿ ಮೀಸಲಾತಿ ಪರವಾಗಿ ಮಾತನಾಡಿದ್ದ ಅವರು, ಈಗ ಮೀಸಲಾತಿ ವಿರೋಧಿಯಾಗಿದ್ದಾರೆ. ಇದು ಕಾಂಗ್ರೆಸ್‌ನ ಮನಸ್ಥಿತಿ ಭಾಗವೇ ಆಗಿದೆ. ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮೀಸಲಾತಿ ತೆಗೆಯುವಂತೆ ಮನವಿ ಮಾಡಿದ್ದರು ಎಂದು ಮೋಹನ್ ವಿಶ್ವ ಹೇಳಿದರು.
ರಾಹುಲ್ ಅಜ್ಜಿ ಇಂದಿರಾ ಗಾಂಧಿ ಕೂಡ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದರು. ರಾಜೀವ್ ಗಾಂಧಿ ಸಂಸತ್‌ನಲ್ಲಿ ಮೀಸಲಾತಿ ವಿರುದ್ಧ ಮಾತನಾಡಿದ್ದರು. ಇದು ಕಾಂಗ್ರೆಸ್‌ನ ಮನಸ್ಥಿತಿ. ಅವರು ಹೇಳುವುದಕ್ಕೂ ಮಾಡುವುದಕ್ಕೂ ಸಂಬಂಧ ಇಲ್ಲದಂತೆ ವರ್ತಿಸುತ್ತಾರೆ ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್, ಎಂ.ಬಿ.ಹರಿಕೃಷ್ಣ, ಜಿಲ್ಲಾ ಸಹ ವಕ್ತಾರ ಶ್ರೀನಾಥ್, ಪ್ರಮುಖರಾದ ಕೆ.ವಿ.ಅಣ್ಣಪ್ಪ, ಚಂದ್ರಶೇಖರ್, ವಿಜಯೇಂದ್ರ ರೆಡ್ಡಿ, ಶ್ರೀನಾಗ್ ಸುದ್ದಿಗೋಷ್ಠಿಯಲ್ಲಿದ್ದರು.