ನಿವೃತ್ತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಕುಸಿದು ಬಿದ್ದಿದ್ದ ಎಎಸ್‌ಐ ಸಾವು!

Ananda Venkataram ASI Kundapura
Published on

ಕೋಟ: ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಕುಸಿದು ಬಿದ್ದಿದ್ದ ಕೋಟ ಪೊಲೀಸ್ ಠಾಣೆ ಎಎಸ್‌ಐ ಆನಂದ ವೆಂಕಟರಾಮ್ (60) ಮಂಗಳವಾರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.

ಭಾನುವಾರ ನಿವೃತ್ತರಾಗಿದ್ದ ಅವರು ಠಾಣೆಯಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಬಫೆ ಊಟ ಮಾಡುತ್ತಿದ್ದಾಗ ಕುಸಿದು ಬಿದ್ದಿದ್ದರು. ತಕ್ಷಣ ಸಹೋದ್ಯೋಗಿಗಳು ಕೋಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಎರಡು ದಿನಗಳ ಕಾಲ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಮಿದುಳು ಸಮಸ್ಯೆಗೊಳಗಾದ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಬೈಂದೂರು ನಿವಾಸಿಯಾಗಿದ್ದ ಅವರು ಮೂಡುಬಿದಿರೆ, ಕೋಟ, ಶಂಕರನಾರಾಯಣ, ಗಂಗೊಳ್ಳಿ, ಕಾಪು ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಎಎಸ್‌ಐ ಆಗಿ ಪದೋನ್ನತಿ ಹೊಂದಿ ಮತ್ತೆ ಕೋಟ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net