

ಬೆಂಗಳೂರು: ನಗರದ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುವವರ ಮೊಬೈಲ್ಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಬಸ್ಸಿನ ಕಿಟಕಿ ಬದಿ ಸೀಟಿನಲ್ಲಿ ಕುಳಿತು ಫೋನಲ್ಲಿ ಮಾತನಾಡುತ್ತಿದ್ದ ಪ್ರಯಾಣಿಕರನ್ನೇ ಈತ ಟಾರ್ಗೆಟ್ ಮಾಡುತ್ತಿದ್ದುದ್ದಾಗಿ ತಿಳಿದುಬಂದಿದೆ.
ಅಶೋಕ್ ನಗರ ಠಾಣೆಯ ಎಎಸ್ಐ ದೇವರಾಜು ಗಸ್ತಿನಲ್ಲಿದ್ದ ಸಮಯದಲ್ಲಿ ಮೊಬೈಲ್ ಕಳ್ಳ ಮುಬಾರಕ್ ಸಿಕ್ಕಿಬಿದ್ದಿದ್ದಾನೆ. ಆರೋಪಿಯ ಜತೆಗಿದ್ದ ಇಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆತನ ಈವರೆಗಿನ ಕಳ್ಳತನ ವಿಚಾರ ಬಯಲಾಗಿದೆ.
ಮುಬಾರಕ್ ಬಳಿ ಇದ್ದ 5 ಲಕ್ಷ ಮೌಲ್ಯದ 101 ಮೊಬೈಲ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪರಾರಿಯಾಗಿರುವ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ. (ಏಜೆನ್ಸೀಸ್)