ಟವರ್ ಸ್ಥಾಪನೆ ಕಾಮಗಾರಿ ವಿರೋಧಿಸಿದವರ ಬಂಧನ : 8 ಮಂದಿ ಪೊಲೀಸ್ ವಶಕ್ಕೆ ಸಂಜೆ ವೇಳೆ ಬಿಡುಗಡೆ

Published on

ಗುರುಪುರ: ಉಡುಪಿ-ಕಾಸರಗೋಡು ವಿದ್ಯುತ್ ಸಾಗಾಟ ನಿಯಮಿತದ(ಯುಕೆಟಿಎಲ್) 440 ಕೆವಿ ವಿದ್ಯುತ್ ಮಾರ್ಗ ಯೋಜನೆಗಾಗಿ ಕುಪ್ಪೆಪದವಿನ ನೀರಳಿಕೆ ಎಂಬಲ್ಲಿ ಜೆಸಿಂತಾ ಕುಟಿನ್ಹೊ ಎಂಬುವರ ಖಾಸಗಿ ಜಾಗದಲ್ಲಿ ಅಕ್ರಮವಾಗಿ ವಿದ್ಯುತ್ ಟವರ್ ಸ್ಥಾಪನೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆಸಿದ ರೈತ ಸಂಘದ ಕಾರ್ಯಕರ್ತರನ್ನು ಗುರುವಾರ ಮಧ್ಯಾಹ್ನ ವಶಕ್ಕೆ ಪಡೆದ ಪೊಲೀಸರು ಸಂಜೆ ವೇಳೆಗೆ ಬಿಡುಗಡೆಗೊಳಿಸಿದ್ದಾರೆ.

ಜೆಸಿಂತಾರ ಖಾಸಗಿ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿದ ಕಂಪೆನಿ ಸಿಬ್ಬಂದಿ ಬೆದರಿಕೆಯೊಡ್ಡಿ ಕೆಲಸ ಮುಂದುವರಿಸಿದ್ದಾರೆ. ಜಾಗದ ಸರ್ವೇ ನಡೆಸದೆ ಅಥವಾ ಕಾಮಗಾರಿ ಬಗ್ಗೆ ಮಾಹಿತಿ ನೀಡದೆ ದಬ್ಬಾಳಿಕೆಯಿಂದ ಟವರ್ ಸ್ಥಾಪಿಸುತ್ತಿದ್ದಾರೆ ಎಂದು ಆರೋಪಿಸಿದ ರೈತ ಸಂಘದ ಕಾರ್ಯಕರ್ತರು ಗುರುವಾರ ಬೆಳಗ್ಗೆ ನೀರಳಿಕೆಯಲ್ಲಿ ಕಾಮಗಾರಿಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ್ದರು.

ಘಟನಾ ಸ್ಥಳಕ್ಕೆ ಆಗಮಿಸಿದ್ದ ಮಂಗಳೂರು ತಹಸೀಲ್ದಾರ್ ರಮೇಶ್ ಬಾಬು ಹಾಗೂ ಬಜ್ಪೆ ಠಾಣೆ ಪೊಲೀಸ್ ವೃತ್ತ ನಿರೀಕ್ಷಕ ಸಂದೀಪ್ ಪ್ರತಿಭಟನಕಾರರೊಂದಿಗೆ ಮಾತನಾಡಿ, ನ್ಯಾಯಾಲಯದ ಆದೇಶದಂತೆ ಕಾಮಗಾರಿ ನಡೆಯುತ್ತಿದೆ. ಸಮಸ್ಯೆ ಇದ್ದಲ್ಲಿ ಕಂಪನಿಯೊಂದಿಗೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬಹುದು. ನ್ಯಾಯಾಲಯಕ್ಕೆ ದಾವೆ ಹೂಡಬಹುದು. ಆದರೆ ಕಾಮಗಾರಿಗೆ ತಡೆಯೊಡ್ಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಾಗುತ್ತದೆ. ನಾವು ನ್ಯಾಯಾಲಯದ ಆದೇಶ ಪಾಲಿಸಬೇಕಾಗುತ್ತದೆ ಎಂದು ಸಮಜಾಯಶಿ ನೀಡಿದರು.

ಆದಾಗ್ಯೂ ಪ್ರತಿಭಟನಕಾರರು ಕಾಮಗಾರಿಗೆ ತಡೆ ಮುಂದುವರಿಸಿದರು. ಈ ಕಾರಣಕ್ಕಾಗಿ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಸಂಜೆ ಹೊತ್ತಿಗೆ ಬಿಡುಗಡೆಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net