

ಬದಿಯಡ್ಕ: ಮರೆತು ಹೋಗುವ ಕನ್ನಡ ಪದವನ್ನು ಸಂಗ್ರಹಿಸಿ ಪ್ರಕಟಿಸಿರುವ ಕಾರ್ಯ ಶ್ಲಾಘನೀಯ. ಹಳೆಯ ಶಬ್ದಗಳು, ಗಾದೆಗಳು ಅಜ್ಜನ ಆಶೀರ್ವಾದ ರೂಪದಲ್ಲಿ ಸಮಾಜಕ್ಕೆ ಲಭ್ಯವಾಗಿದೆ. ಕುಂಬಳೆ ಸೀಮೆಯಲ್ಲಿರುವ ಹವಿಗನ್ನಡದ ಅಪರೂಪದ ಶಬ್ದಗಳ ಕೋಶ ಇದಾಗಿದ್ದು, ಸಾವಿರಕ್ಕೂ ಹೆಚ್ಚು ಪದಗಳನ್ನು ಒಳಗೊಂಡಿದೆ. ನಮ್ಮ ಬಗ್ಗೆ, ನಮ್ಮ ಭಾಷೆ ಬಗ್ಗೆ ಅಭಿಮಾನ ಮೂಡಲಿ ಎಂದು ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮೀಜಿ ಹೇಳಿದರು.
ಗೋಕರ್ಣದ ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಮುಳ್ಳೇರಿಯ ಮಂಡಲದ ನೀರ್ಚಾಲು, ಚಂದ್ರಗಿರಿ, ಈಶ್ವರಮಂಗಲ, ಕುಂಬಳೆ, ಪೆರಡಾಲ ಮತ್ತು ಪಳ್ಳತ್ತಡ್ಕ ವಲಯಗಳ ಶಿಷ್ಯ ಭಕ್ತರಿಂದ ಸರ್ವ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಯಕ್ಷಗಾನ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ ಬರೆದಿರುವ ‘ಹವಿನುಡಿ ಸಂಚಿ’ ಕೃತಿಯನ್ನು ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಮಹಾಮಂಡಲ ಉಪಾಧ್ಯಕ್ಷ ಶಾಂತಾರಾಮ ಹೆಗಡೆ ಹಿರೇಮನೆ, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಡಾ.ಡಿ.ಪಿ.ಭಟ್, ಗುರುಕುಲಗಳ ಸಮಿತಿ ಅಧ್ಯಕ್ಷ ಅರುಣ್ ಹೆಗಡೆ, ಮುಖ್ಯ ಇಂಜಿನಿಯರ್ ವಿಷ್ಣು ಬನಾರಿ, ಅಡ್ಕ ಗೋಪಾಲಕೃಷ್ಣ ಭಟ್ಟರ ಪುತ್ರ ಡಾ.ಶಿವಕುಮಾರ ಅಡ್ಕ ದಂಪತಿ ಉಪಸ್ಥಿತರಿದ್ದರು.