

ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಮ್‌ನಲ್ಲಿ ಜಲಮಟ್ಟ ಕಾಯ್ದುಕೊಳ್ಳುವಂತೆ ಶಾಸಕರಿಗೆ ಹಾಗೂ ತಹಸೀಲ್ದಾರಿಗೆ ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ಮನವಿ ಸಲ್ಲಿಸಿದರು.
ಮುಳುಗಡೆ ಪ್ರದೇಶಕ್ಕೆ ಪರಿಹಾರ ನೀಡಿ ತುಂಬೆ ಡ್ಯಾಮ್‌ನಲ್ಲಿ ಆರು ಮೀಟರ್ ನೀರು ಸಂಗ್ರಹಿಸುವುದಾಗಿ ಹೇಳಿ ಯಾವುದೇ ಪೂರ್ವ ಸೂಚನೆ ನೀಡದೆ 6.5 ಮೀಟರಿಗೂ ಅಧಿಕ ನೀರು ಸಂಗ್ರಹಿಸಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ತುಂಬೆ ಡ್ಯಾಮಿನಲ್ಲಿ ಜಲಮಟ್ಟ ಕಾಯ್ದುಕೊಳ್ಳದೆ ಇರುವುದರಿಂದ ದಾರಿಹೋಕರು, ರೈತರು, ಜಾನುವಾರುಗಳು ಸಂಕಷ್ಟಕ್ಕೊಳಗಾಗಿವೆ. ಗದ್ದೆಗಳಿಗೆ ನೀರು ನುಗ್ಗಿ ರೈತರು ಬೆಳೆಸಿದ ಬೆಳೆ ನೀರುಪಾಲಾಗುತ್ತಿದೆ. ಆದುದರಿಂದ ಆರು ಮೀಟರ್‌ಗಿಂತ ಹೆಚ್ಚು ನೀರು ನಿಲ್ಲಿಸುವ ಇರಾದೆ ಜಿಲ್ಲಾ ಆಡಳಿತಕ್ಕೆ ಇದ್ದರೆ ಮುಂಚಿತವಾಗಿ ತಿಳಿಸಿ ಸಂತ್ರಸ್ತ ರೈತರಿಗೆ ಕೇಂದ್ರ ಜಲ ಆಯೋಗ ತಿಳಿಸಿದಂತೆ ಒರತೆ ಪ್ರದೇಶಕ್ಕೆ ಸೇರಿಸಿ ಮುಳುಗಡೆ ಪ್ರದೇಶಕ್ಕೆ ನ್ಯಾಯೋಚಿತ ಪರಿಹಾರ ನೀಡಿ ನೀರು ಸಂಗ್ರಹಿಸುವಂತೆ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.