ನಾಳೆ ಕಕ್ಕಿಂಜೆಯಲ್ಲಿ ಬೃಹತ್ ಪ್ರತಿಭಟನೆ

Published on

ಬೆಳ್ತಂಗಡಿ: ಗೋವಿನ ತಲೆ, ಮೃತದೇಹ, ಚರ್ಮ, ಮೂಳೆ ಮೊದಲಾದ ಅವಶೇಷಗಳನ್ನು ಚಾರ್ಮಾಡಿ ಗ್ರಾಮದ ಮೃತ್ಯುಂಜಯ ನದಿಗೆ ಎಸದೆ ಘಟನೆ ಕುರಿತು ವಿಹಿಂಪ ಮತ್ತು ಬಜರಂಗದಳದ ವತಿಯಿಂದ ಜ.6ರಂದು ಕಕ್ಕಿಂಜೆಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

ಉಜಿರೆಯ ಶಾರದಾ ಮಂಟಪದಲ್ಲಿ ನಡೆದ ಸಭೆಯಲ್ಲಿ ಹಿಂದು ಸಂಘಟನೆಗಳ ಸದಸ್ಯರು ಭಾಗವಹಿಸಿ ಕಕ್ಕಿಂಜೆಯಲ್ಲಿ ನಡೆಯಲಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಡಿ.30 ರಂದು ಕಕ್ಕಿಂಜೆಯಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಪೊಲೀಸ್ ಇಲಾಖೆ ಒಂದು ವಾರದೊಳಗೆ ದುಷ್ಕೃತ್ಯ ನಡೆಸಿದ ಮಂದಿಯನ್ನು ಪತ್ತೆ ಹಚ್ಚುವುದಾಗಿ ತಿಳಿಸಿದ ಕಾರಣ ಪ್ರತಿಭಟನೆ ಮುಂದೂಡಲಾಗಿತ್ತು. ಆದರೆ ಇದೀಗ ಇನ್ನೂ ಕೂಡ ಈ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸೋಮವಾರ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ವಿಹಿಂಪ ಬಜರಂಗದಳ ಬೆಳ್ತಂಗಡಿ ತಾಲೂಕು ಅಧ್ಯಕ್ಷ ದಿನೇಶ್ ಚಾರ್ಮಾಡಿ ತಿಳಿಸಿದ್ದಾರೆ.

ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ಅನ್ನಾರು ಸೇತುವೆ ಬಳಿ ಮೃತ್ಯುಂಜಯ ನದಿಗೆ ಯಾರೋ ಕಿಡಿಗೇಡಿಗಳು ಸುಮಾರು 11 ಗೋಣಿ ಚೀಲಗಳಲ್ಲಿ ತಂದು ಹಾಕಿರುವುದು ಡಿ.17ರಂದು ಪತ್ತೆಯಾಗಿತ್ತು. ಇದು ಧರ್ಮಸ್ಥಳದ ಸ್ನಾನಘಟ್ಟವನ್ನು ಅಪವಿತ್ರ ಮಾಡುವ ಹುನ್ನಾರ ಎಂಬ ಆರೋಪ ಕೇಳಿಬಂದಿದೆ. ಸ್ನಾನಘಟ್ಟ ಅಪವಿತ್ರವಾಗದಂತೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಬರದಂತೆ ಎಲ್ಲ ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net