

ಬೆಳ್ತಂಗಡಿ: ಇಲ್ಲಿನ ಧರ್ಮಪ್ರಾಂತ್ಯದ ನೇತೃತ್ವದಲ್ಲಿ ಜ್ಞಾನನಿಲಯ ಬೆಳ್ತಂಗಡಿಯಲ್ಲಿ ತಾಲೂಕಿನ ವಿವಿಧ ಗಣ್ಯ ವ್ಯಕ್ತಿಗಳನ್ನು, ವಿವಿಧ ಸಂಘ ಸಂಸ್ಥೆಗಳ ನಾಯಕರನ್ನು ಹಾಗೂ ಧರ್ಮಪ್ರಾಂತ್ಯದ ವಿವಿಧ ಕಾರ್ಯಗಳಿಗೆ ಸಹಕರಿಸುತ್ತಿರುವರನ್ನು ಆಹ್ವಾನಿಸಿ ಸೌಹಾರ್ದ ಕೂಟ ಏರ್ಪಡಿಸಲಾಯಿತು.
ಹೊಸವರ್ಷದ ಹಾಗೂ ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಬೆಳ್ತಂಗಡಿ ತಾಲೂಕು ತಹಸೀಲ್ದಾರ್ ಪೃಥ್ವಿ ಸಾನಿಕಂ ನೇತೃತ್ವದಲ್ಲಿ ತಾಲೂಕಿನ ವಿವಿಧ ಗಣ್ಯರು ಜತೆ ಸೇರಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಡಾ.ಟಿ.ಕೃಷ್ಣಮೂರ್ತಿ ಸಾಮಾಜಿಕ ಭಾವೈಕ್ಯತೆ ಕಾಪಾಡುವಲ್ಲಿ ನಮ್ಮ ಪಾತ್ರ ಎನ್ನುವ ವಿಷಯದ ಕುರಿತು ಸಂದೇಶ ನೀಡಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬೆಳ್ತಂಗಡಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಸಂಜಾತ್ ಬಹುಮಾನ ವಿತರಿಸಿದರು. ಹೊಸ ವರ್ಷದ ಅದೃಷ್ಟ ವ್ಯಕ್ತಿಯನ್ನು ಚೀಟಿ ತೆಗೆಯುವ ಮೂಲಕ ಆಯ್ಕೆಮಾಡಿ ಶಾಸಕ ಹರೀಶ್ ಪೂಂಜ ಬಹುಮಾನ ವಿತರಿಸಿದರು.
ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯ ಅಗ್ನೆಸ್ ಚಾಕೊ, ಬೆಳ್ತಂಗಡಿ ತಾಲೂಕು ಕಾಮಗಾರಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ, ತಾಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗ, ಪಪಂ ಮತ್ತು ತಾಪಂನ ಗಣ್ಯರು, ಮಾಧ್ಯಮ ಮಿತ್ರರು, ಸೌಹಾರ್ದ ವೇದಿಕೆಯ ವಿವಿಧ ಗಣ್ಯ ವ್ಯಕ್ತಿಗಳು, ಧರ್ಮಗುರುಗಳು, ಧರ್ಮಭಗಿನಿಯರು ಉಪಸ್ಥಿತರಿದ್ದರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ಸ್ವಾಗತಿಸಿದರು. ಮಾರಿಯಂಬಿಕ ಆಂಗ್ಲ ಮಾಧ್ಯಮ ಶಾಲೆ ಬಂಗಾಡಿ ವಿದ್ಯಾರ್ಥಿನಿಯರು ಸ್ವಾಗತ ನೃತ್ಯ ಮಾಡಿದರು. ಧರ್ಮಪ್ರಾಂತ್ಯದ ಫ್ಯಾಮಿಲಿ ಅಪೋಸ್ಟೋಲೇಟ್ ನಿರ್ದೇಶಕ ಥೋಮಸ್ ಪುಲ್ಲಾಟ್ ಪ್ರಾರ್ಥನೆ ನೆರವೇರಿಸಿದರು. ಧರ್ಮಪ್ರಾಂತ್ಯದ ವಿಕಾರ್ ಜನರಲ್ ಜೋಸೆಫ್ ವಲಿಯ ಪರಂಬಿಲ್ ವಂದಿಸಿದರು. ಡಿ.ಕೆ.ಆರ್.ಡಿ.ಎಸ್ ನಿರ್ದೇಶಕ ಬಿನೋಯಿ ಏ.ಜೆ.ಹಾಗೂ ಡಿ.ಕೆ.ಆರ್.ಡಿ.ಎಸ್.ನ ಸಿಬ್ಬಂದಿ ಸಿಸಿಲಿಯಾ ನಿರೂಪಿಸಿದರು.