ಧಾರ್ಮಿಕ ಕಾರ್ಯಕ್ರಮದಿಂದ ಸಾಮರಸ್ಯದ ಜೀವನ

Kdb_program
Published on

ಕಡಬ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಊರಿನ ಜನತೆ ಸಮರ್ಪಣಾ ಭಾವದಿಂದ ಭಾಗವಹಿಸುವುದರಿಂದ ಆ ಊರಿನಲ್ಲಿ ನಮ್ಮ ಸಂಸ್ಕೃತಿ ಉಳಿಯುವುದರ ಜತೆಗೆ ಸಾಮರಸ್ಯದಿಂದ ಜೀವನ ಮಾಡಲು ಸಾಧ್ಯವಿದೆ ಎಂದು ಶ್ರೀ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಂ ಶ್ರೀ ಕಾಣಿಯೂರು ರಾಮತೀರ್ಥ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಕುದ್ಮಾರು ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಪ್ರಯುಕ್ತ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಗರ್ಭಗುಡಿಯ ಇಷ್ಟಕಾನ್ಯಾಸ ಹಾಗೂ ಗರ್ಭನ್ಯಾಸ, ನಿಧಿ ಸಮರ್ಪಣೆ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು.

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಅಂಗಾರ ಮಾತನಾಡಿ, ಭಕ್ತಿ ಮತ್ತು ಭಾವನೆ ಗಟ್ಟಿಯಾಗಿರಬೇಕು. ಭಕ್ತಿಯ ಭಾವನೆ, ಸಮರ್ಪಣೆ ಮೂಲಕ ಕಾರ್ಯಸಿದ್ಧಿ ಸಾಧ್ಯ ಎಂದರು.

ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ದ.ಕ.ಮಾಜಿ ಸಂಸದ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಬೆಂಗಳೂರು ಸೌಂದರ್ಯ ಎಜುಕೇಶನ್ ಟ್ರಸ್ಟ್‌ನ ಪಿ.ಮಂಜಪ್ಪ, ಉದ್ಯಮಿ ಜಿ.ಕೃಷ್ಣಪ್ಪ ರಾಮಕುಂಜ, ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನ ಆನುವಂಶೀಯ ಮೊಕ್ತೇಸರರು, ಅರ್ಚಕ ಜನೇಶ್ ಭಟ್ ಬರೆಪ್ಪಾಡಿ, ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕಾ ಶ್ರೀನಿಧಿ ಆಚಾರ್ಯ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮೋಹನ ಗೌಡ ಇಡ್ಯಡ್ಕ ಸ್ವಾಗತಿಸಿ, ಲೋಕೇಶ್ ಬಿ.ಎನ್.ವಂದಿಸಿದರು. ಪುರುಷೋತ್ತಮ ಕುಂಡಡ್ಕ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net