

ಬೀದರ್/ಬಸವಕಲ್ಯಾಣ: ತ್ರಿಪುರಾಂತ ಕೆರೆ ದಡದ ನಿಸರ್ಗ ಮಡಿಲಲ್ಲಿರುವ ಹಾಲಿ ಅನುಭವ ಮಂಟಪ ಪಕ್ಕದಲ್ಲೇ ನೂತನ ಅನುಭವ ಮಂಟಪ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಭೂಮಿಪೂಜೆ ನೆರವೇರಿಸಿದರು.
ಮಹಾತ್ಮ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ನಂತರ ಯಡಿಯೂರಪ್ಪ ಅವರು ಬಸವ ಸ್ಮರಣೆಯೊಂದಿಗೆ ವಿಧಿವಿಧಾನ ಪೂರೈಸಿದರು. ಇತ್ತ ಪೂಜಾ ಕೈಂಕರ್ಯ ನೆರವೇರುತ್ತಲೇ ಸಹಸ್ರಾರು ಜನರಿಂದ ಮೊಳಗಿದ ಬಸವ ಜೈಘೊಷಗಳು ಇಡೀ ಅನುಭವ ಮಂಟಪ ಪರಿಸರದಲ್ಲಿ ಮಾರ್ದನಿಸಿದವು. ಬಸವಾನುಯಾಯಿಗಳ ದಶಕದ ಕನಸು ನನಸಗೊಳಿಸುವ ಐತಿಹಾಸಿಕ ಸಂಭ್ರಮದ ಕ್ಷಣಕ್ಕೆ ಈ ಭಾಗದ ಪ್ರಮುಖ ಮಠಾಧೀಶರು, ಜನಪ್ರತಿನಿಧಿಗಳು, ಶರಣ ಸಾಹಿತಿಗಳು ಸಾಕ್ಷಿಯಾದರು. ಇದನ್ನೂ ಓದಿರಿ ಸಿಎಂ ನೇತೃತ್ವದ ಸಭೆಯಲ್ಲೇ ಕಣ್ಣೀರಿಟ್ಟ ಶಾಸಕಿ! ದಯವಿಟ್ಟು ಕಣ್ಣೀರು ಹಾಕ್ಬೇಡಿ.. ಸರ್ಕಾರದ ಮಾನ ಹರಾಜಾಗುತ್ತೆ…
ನಂತರ ಮಾತನಾಡಿದ ಯಡಿಯೂರಪ್ಪ, ನೂತನ ಅನುಭವ ಮಂಟಪಕ್ಕೆ ಭೂಮಿಪೂಜೆ ನೆರವೇರಿಸಿರುವುದು ನನ್ನ ಪೂರ್ವಕಾಲದ ಪುಣ್ಯದ ಭಾಗ್ಯ. ಕರ್ನಾಟಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಿದು. 500 ಕೋಟಿ ರೂ. ವೆಚ್ಚದ ಅನುಭವ ಮಂಟಪ ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಎಲ್ಲರ ಅಪೇಕ್ಷೆಯಂತೆ 4-5 ಲಕ್ಷ ಜನರನ್ನು ಸೇರಿಸಿ, ಪ್ರಧಾನಿ ನರೇಂದ್ರ ಮೋದಿ ಹಸ್ತದಿಂದ ಅದ್ದೂರಿ ಉದ್ಘಾಟನೆ ನೆರವೇರಿಸಲಾಗುವುದು ಎಂದು ಘೋಷಿಸಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ಮಾಡಿದ ಸಾಮಾಜಿಕ ಕ್ರಾಂತಿ ಅವಿಸ್ಮರಣೀಯ. ಅನುಭವ ಮಂಟಪ ಮೂಲಕ ವಿಶ್ವಕ್ಕೆ ಮೊದಲ ಸಲ ಪ್ರಜಾಪ್ರಭುತ್ವ, ಸಂಸತ್ತಿನ ಪರಿಕಲ್ಪನೆ ಕೊಟ್ಟರು. ಗತವೈಭವದ ಪುನರುತ್ಥಾನ ಜತೆಗೆ ಮುಂದಿನ ಪೀಳಿಗೆಗೆ ಶರಣರ ಚಿಂತನೆ ತಿಳಿಸಿ ಸುಂದರ ಸಮಾಜ ನಿರ್ವಣಕ್ಕೆ ಭದ್ರ ಬುನಾದಿ ಹಾಕುವ ಕೆಲಸ ನೂತನ ಅನುಭವ ಮಂಟಪ ಮಾಡಲಿದೆ. ಬಸವತತ್ವ ಅನುಕರಣೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವೆನಿಸಿದೆ ಎಂದು ಯಡಿಯೂರಪ್ಪ ಹೇಳಿದರು.
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು. ಡಿಸಿಎಂ ಲಕ್ಷ್ಮಣ ಸವದಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ, ಶರಣ ಸಾಹಿತಿ ಅರವಿಂದ ಜತ್ತಿ ಮತ್ತಿತರರು ಉಪಸ್ಥಿತರಿದ್ದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತರೂ ಆದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವಿಶೇಷಾಧಿಕಾರಿ ಡಾ.ಮಹಾದೇವ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
125 ತಾಯಿ, ಮಕ್ಕಳ ಆಸ್ಪತ್ರೆ: ಬೀದರ್ನಲ್ಲಿ 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದ ಸಿಎಂ ಯಡಿಯೂರಪ್ಪ, ತಾಯಿ- ಮಕ್ಕಳ ಆರೈಕೆ ಹಾಗೂ ಆರೋಗ್ಯ ಕಾಳಜಿಗೆ ಆದ್ಯತೆ ನೀಡುವ ಸದುದ್ದೇಶದಿಂದ ಬರುವ ಐದು ವರ್ಷಗಳಲ್ಲಿ ರಾಜ್ಯಾದ್ಯಂತ 125 ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದರು.