ಹರಿಯುವ ನೀರಿಗೆ ಅಂತರಗಂಗೆ ಅಡ್ಡಿ

Antharagange
ಹುಲುಸಾಗಿ ಬೆಳೆದಿರುವ ಅಂತರಗಂಗೆ.
Published on

ಕೋಟ: ಅಂತರಗಂಗೆ ಎನ್ನುವ ಒಂದು ಜಾತಿಯ ಸಸ್ಯ ಸಂಕುಲ ಹೊಳೆ, ತೊರೆಗಳಿಗೆ ಸಂಕಷ್ಟ ತಂದೊಡ್ಡುತ್ತಿದೆ. ಮಳೆಗಾಲದಲ್ಲಿ ಇದರ ಬೆಳವಣಿಗೆ ಜನಸಾಮಾನ್ಯರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

ತೆಕ್ಕಟ್ಟೆ ಗ್ರಾಮ ಪಂಚಾಯಿತಿ ಕೊಜೆ(ಆವೆಮಣ್ಣು) ಹೊಂಡದಲ್ಲಿ ಉತ್ಪತ್ತಿಗೊಳ್ಳುವ ಈ ಅಂತರಗಂಗೆ ಸನಿಹದ ಕೋಟ ಗ್ರಾಮ ಪಂಚಾಯಿತಿ, ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ಚಿತ್ರಪಾಡಿಯ ಸಾಕಷ್ಟು ಭಾಗಗಳಲ್ಲಿ ಸಮಸ್ಯೆ ಸೃಷ್ಟಿಸುತ್ತಿದೆ.

ಮಳೆಗಾಲದಲ್ಲಿ ಹರಿಯುವ ನೀರಿನ ತೋಡು, ಹೊಳೆಗಳ ಮೂಲಕ ಕೃಷಿ ಇನ್ನಿತರ ಪ್ರದೇಶಗಳಿಗೆ ಲಗ್ಗೆ ಇಡುತ್ತದೆ. ಇದರ ಹಾವಳಿಗೆ ನೀರು ಸರಾಗವಾಗಿ ಹರಿಯಲಾಗದೆ ತಡೆಯೊಡ್ಡಿ ನಿಲ್ಲುತ್ತಿದೆ. ಇದೀಗ ಗಿಳಿಯಾರು ಭಾಗ, ಕಾರ್ತಟ್ಟು ಚಿತ್ರಾಡಿ ಭಾಗದ ಸೇತುವೆ ಬಳಿ ಭಾರಿ ಪ್ರಮಾಣದಲ್ಲಿ ತುಂಬಿ ತುಳುಕುತ್ತಿದೆ. ಈ ಹಿನ್ನೆಲೆಯಲ್ಲಿ ನೆರೆ ಸೃಷ್ಟಿಯಾಗಿ ಸಾಕಷ್ಟು ಕೃಷಿ, ಮನೆಗಳು ಜಲಾವೃತಗೊಳ್ಳುತ್ತಿವೆ. ಪ್ರತಿ ಬಾರಿ ಕೋಟ ಹಾಗೂ ಸಾಲಿಗ್ರಾಮ ಪ.ಪಂ ಸೇತುವೆಯ ಬಳಿ ಇರುವ ಅಂತರಗಂಗೆಯನ್ನು ತೆರವುಗೊಳಿಸಲಾಗುತ್ತಿದೆ. ಆದರೂ ಪ್ರತಿವರ್ಷ ಈ ಸಮಸ್ಯೆ ಉಳಿದುಕೊಳ್ಳುತ್ತದೆ.

ಅಂತರಗಂಗೆ ಜತೆ ತ್ಯಾಜ್ಯ

ತೋಡು, ಹೊಳೆಗಳಲ್ಲಿ ಅಂತರಗಂಗೆ ಜತೆಗೆ ತ್ಯಾಜ್ಯ ಕೂಡ ಅಡೆತಡೆ ಒಡ್ಡುತ್ತಿದೆ. ಇತ್ತೀಚಿಗಿನ ದಿನಗಳಲ್ಲಿ ತೋಡುಗಳ ಸಮೀಪ ವಿಪರೀತವಾಗಿ ತ್ಯಾಜ್ಯ ಎಸೆಯುತ್ತಿರುವುದು ಬೆಳಕಿಗೆ ಬಂದಿದೆ. ಇದು ಕೂಡ ಅಂತರಂಗೆ ಜತೆಗೆ ಕೃಷಿ ಭೂಮಿ ಹಾಗೂ ಸಮುದ್ರವನ್ನು ಸೇರುತ್ತಿರುವುದಲ್ಲದೆ ಹರಿಯುವ ನೀರಿಗೆ ಸಂಚಕಾರ ತಂದೊಡ್ಡಿದೆ.

ಸಮಸ್ಯೆಗೆ ಮುಕ್ತಿಗಾಣಿಸಿ

ಅಂತರಗಂಗೆ ಸಮಸ್ಯೆಗೆ ಮುಕ್ತಿಗಾಣಿಸಲು ಕೃಷಿ ಸಮುದಾಯ ಹಾಗೂ ಸ್ಥಳೀಯ ನಿವಾಸಿಗಳು ಸ್ಥಳೀಯಾಡಳಿತ ಹಾಗೂ ಸಂಬಂಧಿಸಿದ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಪ್ರತಿ ವರ್ಷ ಈ ಸಮಸ್ಯೆ ಕಾಡುತ್ತದೆ. ನೆರೆ ಬಂದಾಗ ಭತ್ತದ ಕೃಷಿ ಭೂಮಿಗೆ ನುಗ್ಗಿ ಭಾರಿ ಪ್ರಮಾಣದಲ್ಲಿ ಹಾನಿಯಾಗುತ್ತಿದೆ. ಈ ಹಿನ್ನೆಲೆ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಲು ಕೃಷಿಕರು ಒತ್ತಾಯಿಸಿದ್ದಾರೆ.

ಸಾಕಷ್ಟು ವರ್ಷಗಳಿಂದ ಅಂತರಗಂಗೆ ಹೊಳೆ, ತೋಡುಗಳ ಮೂಲಕ ನೆರೆ ಸಂದರ್ಭದಲ್ಲಿ ಕೃಷಿ ಭೂಮಿ ಸೇರುತ್ತಿದೆ. ಇದರಿಂದ ಕೃಷಿ ಕಾರ್ಯಕ್ಕೆ ಭಾರಿ ಹಿನ್ನಡೆಯಾಗುತ್ತಿದೆ. ನೀರು ಸರಾಗವಾಗಿ ಹರಿಯಲಾಗದೆ ಸುತ್ತಮುತ್ತಲ ಪರಿಸರದಲ್ಲಿ ನೆರೆಯಾಗಿ ಪರಿಣಮಿಸುತ್ತಿದೆ. ಕೋಟ ಗ್ರಾ.ಪಂ., ಸಾಲಿಗ್ರಾಮ ಪ.ಪಂ ಇದನ್ನು ತೆರವುಗೊಳಿಸುತ್ತಿದ್ದರೂ ಶಾಶ್ವತವಾಗಿ ಇದಕ್ಕೆ ಪರಿಹಾರ ಕ್ರಮಗಳ ಅಗತ್ಯ ಇದೆ.-ಭೋಜ ಪೂಜಾರಿ, ಕೃಷಿಕರು ಗಿಳಿಯಾರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net