

ಬಾಗಲಕೋಟೆ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾ.25ರಿಂದ ಏ.6ರವರೆಗೆ ನಡೆಸಿದ 2023-24ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆ-1ರ ಫಲಿತಾಂಶ ಇಂದು ಅಧಿಕೃತವಾಗಿ ಪ್ರಕಟಗೊಂಡಿತು. ಕಳೆದ ವರ್ಷಗಳಂತೆ ಈ ವರ್ಷವೂ ಸಹ ಬಾಲಕಿಯರೆ ಮೇಲುಗೈ ಸಾಧಿಸಿದ್ದಾರೆ. ಪ್ರಸಕ್ತ ವರ್ಷದ ಫಲಿತಾಂಶದಲ್ಲಿ ಕರುನಾಡ ಜನರ ಮನಸ್ಸು ಗೆದ್ದಿದ್ದು, 625ಕ್ಕೆ 625 ಅಂಕ ಗಳಿಸಿ, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿನಿ ಅಂಕಿತಾ ಕೊಣ್ಣೂರು.
ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಟಾಪರ್ ಆಗಿ ಹೊರಹೊಮ್ಮಿದ ಅಂಕಿತಾ ಕೊಣ್ಣೂರು ಸಾಧನೆ ಮೆಚ್ಚಿ ಸ್ವಗ್ರಾಮದ ಜನರು ಅಭಿನಂದನೆಗಳನ್ನು ಸಲ್ಲಿಸಿದ್ದು, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಹುಟ್ಟೂರಾದ ವಜ್ಜರಮಟ್ಟಿಯಲ್ಲಿ ಇದೀಗ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ರಾಜ್ಯವ್ಯಾಪಿ ಅಂಕಿತಾಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದ್ದು, ಸನ್ಮಾನಗಳು ಜೋರಾಗಿವೆ.
ಗ್ರಾಮದ ಮಗಳು ಇಡೀ ರಾಜ್ಯವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾಳೆಂಬ ಖುಷಿಗೆ ಪಾರವೇ ಇಲ್ಲ. ಅಂಕಿತಾಳನ್ನು ಹೊತ್ತು ಖುಷಿ ಪಟ್ಟ ಗ್ರಾಮಸ್ಥರು, ಇತರರಿಗೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಶಿಕ್ಷಣ ಇಲಾಖೆ, ತಾಲೂಕು ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರಿಂದ ಸನ್ಮಾನಗಳು ಒಲಿದುಬಂದಿವೆ.