ಕಾರ್ಕಡದಲ್ಲಿ ಶ್ರೀಕೃಷ್ಣದೇವರಾಯನ ಶಾಸನ ಪತ್ತೆ

shasana
ಕಾರ್ಕಡ ಪಡುಹೋಳಿಯ ನಾಗೇಶ್ವರ ಸೋಮಯಾಜಿ ಅವರ ಜಮೀನಿನಲ್ಲಿದ್ದ ಶಾಸನವನ್ನು ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅಧ್ಯಯನಕ್ಕೆ ಒಳಪಡಿಸಿದರು.
Published on

ಕೋಟ: ಬ್ರಹ್ಮಾವರ ತಾಲ್ಲೂಕಿನ, ಸಾಲಿಗ್ರಾಮ ಕಾರ್ಕಡದ ಪಡುಹೋಳಿಯ ನಾಗೇಶ್ವರ ಸೋಮಯಾಜಿ ಎಂಬುವರ ಜಮೀನಿನಲ್ಲಿರುವ ಶಾಸನವನ್ನು ಕಂಚಾರ್ತಿ ರಾಜೇಶ್ವರ ಉಪಾಧ್ಯಾಯ ಅವರ ಮಾಹಿತಿ ಮೇರೆಗೆ, ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ಪುರಾತತ್ವ ವಿಭಾಗ ಉಪನ್ಯಾಸಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅಧ್ಯಯನಕ್ಕೆ ಒಳಪಡಿಸಿದರು.

ತುಳುವ ಮನೆತನದ ಶ್ರೀಕೃಷ್ಣದೇವರಾಯನ ಕಾಲ

ಕಣ(ಗ್ರಾನೈಟ್)ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ, ಸೂರ್ಯ-ಚಂದ್ರ ಮತ್ತು ಇಕ್ಕೆಲಗಳಲ್ಲಿ ನಂದಿ, ರಾಜಕತ್ತಿ ಮತ್ತು ದೀಪಕಂಬದ ಉಬ್ಬು ಕೆತ್ತನೆ ಇದೆ. ಸುಮಾರು 5 ಅಡಿ ಎತ್ತರ ಮತ್ತು 2.5 ಅಡಿ ಅಗಲವಾಗಿರುವ ಈ ಶಾಸನವು ವಿಜಯನಗರದ ತುಳುವ ಮನೆತನದ ದೊರೆ ಕೃಷ್ಣದೇವರಾಯನ ಕಾಲಕ್ಕೆ ಸೇರಿದ್ದಾಗಿದೆ.

ಬಾರಕೂರು ಉಲ್ಲೇಖ ಇರುವ ದಾನ ಶಾಸನ

ಶ್ರೀ ಗಣಾಧಿಪತಯೇಂ ನಮಃ ಎಂಬ ಶುಭ ಸೂಚಕದಿಂದ ಪ್ರಾರಂಭವಾಗುವ ಈ ಶಾಸನವು, ಶಕವರ್ಷ 1440ರ(ಸಾ.ಶ.ವ 1518) ಬಹುಧಾನ್ಯ ಸಂವತ್ಸರದ ಭಾದ್ರಪದ ಬಹುಳ ಎಂಬ ಕಾಲಮಾನ ಉಲ್ಲೇಖಿಸಿದ್ದು, ಈ ಸಂದರ್ಭ ಕೃಷ್ಣದೇವರಾಯನು (1509-1529) ವಿಜಯನಗರಿಯ ಸಿಂಹಾಸನದಲ್ಲಿದ್ದು, ಬಾರಕೂರ ರಾಜ್ಯವನ್ನು ವಿಜಯಪ್ಪ ಒಡೆಯ (ಸಾ.ಶ.ವ 1519-20) ನೋಡಿಕೊಳ್ಳುತ್ತಿದ್ದ ಎಂಬ ಮಾಹಿತಿ ನೀಡುತ್ತದೆ. ಶಾಸನದಲ್ಲಿ ಧಾರಾಪೂರ್ವಕವಾಗಿ ಧಾರೆಯೆರೆದು ಕೊಟ್ಟ ದಾನ ಎಂಬ ಉಲ್ಲೇಖವಿದ್ದು, ದಾನ ವಿವರಣಾ ಭಾಗವು ತೃಟಿತಗೊಂಡಿದ್ದರಿಂದ ದಾನವನ್ನು ಯಾರು ಮತ್ತು ಯಾರಿಗೆ ನೀಡಿದ್ದರೆಂದು ತಿಳಿದು ಬರುವುದಿಲ್ಲ. ಶಾಸನದಲ್ಲಿ ಕರಣಿಕ ಮಲ, ಸರ, ಅಂಣ ಎಂಬ ವ್ಯಕ್ತಿಗಳ ಉಲ್ಲೇಖವಿದ್ದು, ಕೊನೆಯಲ್ಲಿ ಶಾಪಾಶಯ ವಾಕ್ಯವನ್ನು ಕಾಣಬಹುದು.

ಕ್ಷೇತ್ರಕಾರ್ಯಕ್ಕೆ, ಉಡುಪಿ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ ಸತ್ಯನಾರಾಯಣ ಸೋಮಯಾಜಿ ಮತ್ತು ಕೆ.ವಿ.ಸುಬ್ರಮಣ್ಯಂ ಅವರು ಸಹಕಾರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net