

ಮೂಲ್ಕಿ: ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಶೇ.93ರಷ್ಟು ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡಿದ್ದು, ಅನ್ನಭಾಗ್ಯ ಯೋಜನೆಗೆ ರಾಜಕೀಯ ಪ್ರೇರಿತ ಅಡಚಣೆಗಳು ಬಂದರೂ ಫಲಪ್ರದವಾಗಿದೆ ಎಂದು ಗ್ಯಾರಂಟಿ ಯೋಜನೆ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಹೇಳಿದರು.
ನ.ಪಂ. ವ್ಯಾಪ್ತಿಯ ಕಾರ್ನಾಡ್ ಗಾಂಧಿ ಮೈದಾನದ ಬಳಿ ಮೂಲ್ಕಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ನೊಂದಾವಣೆ ಬಾಕಿ ಇರುವ ಹಾಗೂ ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಐಟಿ ಮತ್ತು ಜಿಎಸ್ಟಿ ಸಮಸ್ಯೆಗಳಿಂದಾಗಿ ಅರ್ಜಿ ವಿಲೇವಾರಿ ಸಮಸ್ಯೆ ರಾಜ್ಯಮಟ್ಟದಲ್ಲಿ ಬಗೆಹರಿಸಬೇಕಾಗಿದೆ. ಜಿಡಿಪಿ ಪ್ರಗತಿಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ಪ್ರಥಮವಾಗಿದ್ದು, ಆರ್ಥಿಕ ಸುಧಾರಣೆಯಾಗಿ ಜನರ ಬದುಕು ಹಸನಾಗಿದೆ. ಸರ್ಕಾರ ಬಡವರ ಪರವಾಗಿದೆ ಎನ್ನುವುದಕ್ಕೆ ಗ್ಯಾರಂಟಿ ಯೋಜನೆಗಳು ಸಾಕ್ಷಿಯಾಗಿದೆ. ಅಂಗನವಾಡಿ ಶಿಕ್ಷಕರಿಗೆ ಕನಿಷ್ಠ ವೇತನ ಹಾಗೂ ಮುಷ್ಕರ ನಿರತ ಗ್ರಾಮಕರಣಿಕರ ವೇತನ ಪರಿಷ್ಕರಣೆ ಸಮಸ್ಯೆಗಳ ನಿವಾರಣೆಗೆ ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು ಎಂದರು.
ಮೂಲ್ಕಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆಲ್ವಿನ್ ಕ್ಲೆಮೆಂಟ್ ಕುಟಿನ್ಹ ಅಧ್ಯಕ್ಷತೆ ವಹಿಸಿದ್ದರು.
ಸಮಿತಿ ಸದಸ್ಯರಾದ ವಾಹಿದ್ ತೋಕೂರು, ಜನಾದರ್ನ ಬಂಗೇರ ಕೆ.ಎಸ್.ರಾವ್ ನಗರ, ಅನಿತಾ ಆರಾಹ್ನ, ನೆಲ್ಸನ್, ರಕ್ಷಿತ್ ಕೊಳಚಿ ಕಂಬಳ, ಸುಧಾಕರ ಸಾಲ್ಯಾನ್ ಏಳಿಂಜೆ, ಇಒ ಕುಸುಮಾಧರ ಉಪಸ್ಥಿತರಿದ್ದರು. ಶೈಲಜಾ ನಿರೂಪಿಸಿದರು. ಅಭಿವೃದ್ಧಿ ಅಧಿಕಾರಿಗಳಾದ ಪೂರ್ಣಿಮಾ ವಂದಿಸಿದರು. ಬಳಿಕ ಗ್ಯಾರಂಟಿ ಯೋಜನೆಗಳ ಅರ್ಜಿಗಳ ಅನುಷ್ಠಾನದ ವಿಲೇವಾರಿ ಶಿಬಿರ ನಡೆಯಿತು.