ರಂಜಾನ್ ತಿಂಗಳಲ್ಲಿ ಹಸಿವು ನೀಗಿಸುವ ಪ್ರಯತ್ನ

Ull_Kit
Published on

ಉಳ್ಳಾಲ: ನಾವು ಹೊಟ್ಟೆ ತುಂಬಾ ತಿನ್ನುವಾಗ ನೆರೆಯವರು ಹಸಿವಿನಿಂದ ಇರಬಾರದು ಎನ್ನುವ ಪ್ರವಾದಿ(ಸ.ಅ) ಧ್ಯೇಯ ವಾಕ್ಯದಂತೆ ರಂಜಾನ್ ತಿಂಗಳಲ್ಲಿ ಯಾರೂ ಹಸಿವಿನಿಂದ ಇರಬಾರದು ಎನ್ನುವ ನೆಲೆಯಲ್ಲಿ ಆಹಾರ ಸಾಮಗ್ರಿ ಕಿಟ್ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸುವ ಯೋಚನೆ ಇದೆ ಎಂದು ಅಲೇಕಳ ನುಸ್ರತುಲ್ ಮಸಾಕೀನ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮೊಹಮ್ಮದ್ ತ್ವಾಹ ಹೇಳಿದರು. ಅಲೇಕಳ ನುಸ್ರತುಲ್ ಮಸಾಕೀನ್ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಅಳೇಕಲದಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ಶನಿವಾರ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದಲ್ಲಿರುವ ಬಡವರಿಗೆ ನಮ್ಮಲ್ಲಾಗುವ ಕಿಂಚಿತ್ ಸಹಾಯ ನೀಡುವ ನಿಟ್ಟಿನಲ್ಲಿ 17 ವರ್ಷಗಳ ಹಿಂದೆ ಟ್ರಸ್ಟ್ ಸ್ಥಾಪಿಸಲಾಗಿದ್ದು, ಇದುವರೆಗೆ 60ರಷ್ಟು ಬಡಹೆಣ್ಮಕ್ಕಳ ಮದುವೆ ಮಾಡಲಾಗಿದೆ. ರಂಜಾನ್‌ನಲ್ಲಿ ಕಿಟ್ ವಿತರಣೆ, ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು. 400 ಅರ್ಹ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು. ಹಳೆಕೋಟೆ ಜುಮಾ ಮಸೀದಿಯ ಖತೀಬ್ ಸಿರಾಜುದ್ದೀನ್ ಹಿಮಮಿ ದುಆ ನೆರವೇರಿಸಿದರು. ನಗರಸಭಾ ಸದಸ್ಯ ಯು.ಎ.ಇಸ್ಮಾಯಿಲ್ ಉದ್ಘಾಟಿಸಿದರು. ಉಪಾಧ್ಯಕ್ಷ ಯು.ಎಸ್.ಹನೀಫ್, ಪ್ರಧಾನ ಕಾರ್ಯದರ್ಶಿ ಎ.ಎನ್.ಮೊಹಮ್ಮದ್, ಕಾರ್ಯದರ್ಶಿ ಹಮೀದ್, ಸದಸ್ಯರಾದ ಯು.ಎಚ್.ಸಿದ್ದೀಕ್, ಅಶ್ರಫ್, ರಹ್ಮತುಲ್ಲಾಹ್, ಅಶ್ರಫ್, ಕೆಎಂಕೆ ಮಂಜನಾಡಿ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಹಮೀದ್ ಸ್ವಾಗತಿಸಿದರು.

ರಂಜಾನ್ ಆರಂಭದ ಒಂದು ದಿನ ಮೊದಲೇ ಕುಟುಂಬಕ್ಕೆ ಬೇಕಾದ ಎಲ್ಲ ಆಹಾರ ಸಾಮಗ್ರಿ ನೀಡುವ ಮೂಲಕ ಹಸಿವು ದೂರಗೊಳಿಸುವ ಪ್ರಯತ್ನ ಆಗಿದೆ. ಇದು ಕೇವಲ ತೋರಿಕೆಗೆ ಆಗಿಲ್ಲ, ಅರ್ಹರನ್ನು ಗುರುತಿಸಿ ನೀಡಲಾಗುತ್ತಿದೆ. ಸಿರಾಜುದ್ದೀನ್ ಹಿಮಮಿ, ಖತೀಬ್, ಹಳೆಕೋಟೆ ಜುಮಾ ಮಸೀದಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net