ಶಿಕ್ಷಕರಿಗೆ ಪರ್ಯಾಯ ವ್ಯವಸ್ಥೆ ಅಸಾಧ್ಯ

karyagara
ಉಡುಪಿಯ ಒಳಕಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಕೃತಕ ಬುದ್ಧಿಮತ್ತೆ ಕಾರ್ಯಾಗಾರ ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ಉಡುಪಿ

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಸಹ ಶಿಕ್ಷಕರಿಗೆ ಪರ್ಯಾಯವಾಗಿ ಬೇರಾವ ವ್ಯವಸ್ಥೆಯೂ ತರಗತಿಯ ಕೋಣೆ ಆಕ್ರಮಿಸಲು ಸಾಧ್ಯವಿಲ್ಲ. ಹೀಗಾಗಿ ಶಿಕ್ಷಕರಿಗೆ ಲಭ್ಯವಾಗುವ ಅತ್ಯುನ್ನತ ಸಹಾಯಕನನ್ನಾಗಿ ನಾವು ಕೃತಕ ಬುದ್ಧಿಮತ್ತೆ (ಎಐ)ಯ ತಂತ್ರಜ್ಞಾನ ಬಳಸಿಕೊಳ್ಳಬಹುದಾಗಿದೆ ಎಂದು ಸಂಶೋಧಕ, ವಿಜ್ಞಾನ ಲೇಖಕ ಎಎಸ್‌ಕೆವಿಎಸ್ ಶರ್ಮ ಕೊಳ್ಳೆಗಾಲ ಅಭಿಪ್ರಾಯಪಟ್ಟರು.

ಉಡುಪಿಯ ಒಳಕಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಪ್ರೌಢಶಾಲಾ ಸಹಶಿಕ್ಷಕರಿಗಾಗಿ ಶನಿವಾರ ‘ತರಗತಿ ಕೋಣೆಯಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಬಳಕೆ’ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಪ್ರಾತ್ಯಕ್ಷಿಕೆ: ಎಲ್ಲ ಕ್ಷೇತ್ರಗಳಲ್ಲೂ ಸಹ ಇಂದು ಯಾಂತ್ರಿಕ ಕೃತಕ ಬುದ್ಧಿಮತ್ತೆ ಬಳಸಿಕೊಳ್ಳಲಾಗುತ್ತಿದೆ. ಅನೇಕ ಸ್ವರೂಪಗಳಲ್ಲೀ ಅವು ಲಭ್ಯವಿದೆ. ಶೈಕ್ಷಣಿಕ ಕ್ಷೇತ್ರದಲ್ಲೂ ಸಹ ತಂತ್ರಜ್ಞಾನ ಬಳಸಿಕೊಂಡು, ಆ ವ್ಯವಸ್ಥೆಯನ್ನು ನಮ್ಮ ತರಗತಿಯ ಪ್ರಕ್ರಿಯೆಗಳಲ್ಲಿ ಒಳಗೊಳ್ಳುವ ಮೂಲಕ ಮಕ್ಕಳಿಗೆ ಇನ್ನಷ್ಟು ಶಿಕ್ಷಣ ನೀಡಲು ಸಹಕಾರಿಯಾಗಬಹುದು ಎಂದರು.

ಡಯಟ್ ಪ್ರಾಂಶುಪಾಲ ಡಾ.ಅಶೋಕ ಕಾಮತ ಕಾರ್ಯಕ್ರಮ ಉದ್ಘಾಟಿಸಿ, ಶಿಕ್ಷಣದಲ್ಲಿ ಯಾಂತ್ರಿಕ ಸೌಲಭ್ಯದಿಂದ ಸಮಯ ಪಾಲನೆ ಹಾಗೂ ಸಮಯ ಉಳಿತಾಯ ಎರಡೂ ಸಾಧ್ಯ ಎಂದರು. ಒಳಕಾಡು ಪ್ರೌಢಶಾಲೆ ಮುಖ್ಯ ಶಿಕ್ಷಕಿ ಪೂರ್ಣಿವಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net