

ಬೆಂಗಳೂರು: ಮಹಿಳಾ ಸಂವೇದನೆಯ ಸಂಕೇತವಾಗಿ ಅಕ್ಕಮಹಾದೇವಿ ಬಿಂಬಿತರಾಗುತ್ತಾರೆ. ಕಾವ್ಯ ರಮಣೀಯತೆಯುಳ್ಳ ಅವರ ವಚನಗಳ ಸಾರವನ್ನು ಮಕ್ಕಳು, ಪ್ರಮುಖವಾಗಿ ಮಹಿಳೆಯರು ಅರ್ಥೈಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ (ಅಭಾಶಸಾಪ) ಅಧ್ಯಕ್ಷ ಡಾ. ಸಿ. ಸೋಮಶೇಖರ್ ಹೇಳಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಹಾಗೂ ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನ (ಲಂಡನ್) ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ, ವಚನ ಸಂಭ್ರಮ ಹಾಗೂ ನೈಜೀರಿಯಾದ ಅಂತಾರಾಷ್ಟ್ರೀಯ ಕಾವ್ಯ ಪ್ರಶಸ್ತಿ ಪುರಸತೆ ಡಾ. ಮಮತಾ ಸಾಗರ್ ಅವರಿಗೆ ಅಭಿನಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಕ್ತಿಭಾವಗಳ ವೈರಾಗ್ಯದ ಮೂಲಕ ಪುರುಷ ಸಮುದಾಯವನ್ನು ಛಲದಿಂದ ಎದುರಿಸುತ್ತ, ಸಮಾಜದಲ್ಲಿ ಆಕೆಗೆ ಎದುರಾದ ವಿಭಿನ್ನವಾದ ಪ್ರಶ್ನೆಗಳನ್ನು ಚೆನ್ನಮಲ್ಲಿಕಾರ್ಜುನನ್ನು ನೆನೆಯುತ್ತಲೇ ಸಮಾಧಾನದಿಂದ ತನ್ನ ವಚನಗಳ ಮೂಲಕ ಉತ್ತರಿಸುತ್ತಿದ್ದ ಅಕ್ಕನ ಆತ್ಮಸ್ಥೆ$ರ್ಯ ಮಹಿಳೆಯರ ಸ್ವಾಭಿಮಾನದ ಸಂಕೇತ ಎಂದರು.
12ನೇ ಶತಮಾನದ ಕಾಲಟ್ಟವು ಆರ್ಥಿಕ ಅಸಮಾನತೆ, ಮೂಢನಂಬಿಕೆ, ಮಹಿಳಾ ದೌರ್ಜನ್ಯ, ವೈಚಾರಿಕ ನೆಲೆಯಿಲ್ಲದ ಧಾರ್ಮಿಕ ಆಚರಣೆ ನಡೆಯುತ್ತಿದ್ದ ಐತಿಹಾಸಿಕವಾಗಿ ಸವಾಲುಗಳ ಸಮಯವಾಗಿತ್ತು. ಅಂತಹ ಸಂದರ್ಭದಲ್ಲಿ ಬಸವಾದಿ ಶರಣರಿಂದ ಕ್ರಾಂತಿಯಾಯಿತು. ಅವರಲ್ಲಿ ಮುಂಚೂಣಿಯಲ್ಲಿದ್ದ ಅನ್ಯರ್ ರತ್ನ ಅಕ್ಕಮಹಾದೇವಿ ಎಂದರು.
ಕಾವ್ಯಮೀಮಾಂಸೆ ಇಲ್ಲದ ಸಂದರ್ಭದಲ್ಲಿ ಬಸವಾದಿ ಶರಣರು ವಚನ ರಚಿಸಿ, ಹಾಡಿದರು. ಇಂದು ನಾವು ಹೇಳುತ್ತಿರುವ ಶಿಕ್ಷಣದ ಮಹತ್ವವನ್ನು 12ನೇ ಶತಮಾನದಲ್ಲೇ ಯಾವ ಗುರುವಿಲ್ಲದೆ ವಚನಕಾರರು ಸಾಹಿತ್ಯ ರಚಿಸಿ ತಿಳಿಸಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕಲಾವಿದರು ವಚನ ಗಾಯನ, ವಚನ ವಾಚನ ಹಾಗೂ ವಚನ ನೃತ್ಯ ಪ್ರಸ್ತುತಪಡಿಸಿದರು.
ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ನಾವೆಲ್ಲ ಹೆಚ್ಚಿನ ಪ್ರಜ್ಞೆ ಉಳ್ಳವರಾಗಬೇಕು. ಈ ನಿಟ್ಟಿನಲ್ಲಿ ವಿಚಾರಗಳನ್ನು ಹಂಚಿಕೊಳ್ಳುವ ದೃಷ್ಟಿಯಿಂದ ವಿಭಿನ್ನವಾಗಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಗುತ್ತಿದೆ. ನಾಡು ಕಂಡ ಶ್ರೇಷ್ಠ ವಚನಗಾರ್ತಿ ಅಕ್ಕಮಹಾದೇವಿ ಜಗತ್ತಿನ ಮೊದಲ ಪ್ರಗತಿಪರ ಕವಯತ್ರಿ ಎಂದರೆ ತಪ್ಪಲ್ಲ. ಅವರ ಜಯಂತಿ ಆಚರಿಸುವುದು ಪ್ರತಿಯೊಬ್ಬರೂ ಸಂಭ್ರಮಿಸುವ ವಿಚಾರವಾಗಿದೆ. -ಕೆ.ವಿ.ನಾಗರಾಜಮೂರ್ತಿ, ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ