ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷಯರೋಗಿಗಳ ದತ್ತು!; 2025ರೊಳಗೆ ಕ್ಷಯಮುಕ್ತ ಭಾರತ ನಿರ್ಮಾಣ ಗುರಿ

TB
ದೊಡ್ಡಬಳ್ಳಾಪುರದಲ್ಲಿ ರೋಗಿಗಳ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಸೋಂಕಿತರ ಜತೆ ರಾಜ್ಯ ಕ್ಷಯರೋಗ ಘಟಕ ಉಪನಿರ್ದೇಶಕ ಡಾ. ಅನಿಲ್, ಜಿಲ್ಲಾ ಕ್ಷಯರೋಗ ಘಟಕದ ಅಧಿಕಾರಿ ಡಾ.ನಾಗೇಶ್ ಇದ್ದರು.
Published on

| ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಸಂಪೂರ್ಣವಾಗಿ ಗುಣವಾಗುವ, ಆದರೂ ಪ್ರಾಣಕ್ಕೆ ಮಾರಕವಾಗಬಹುದಾದ ಕ್ಷಯರೋಗ ನಿಮೂಲನೆಗೆ ಪಣತೊಟ್ಟಿರುವ ಜಿಲ್ಲಾ ಆರೋಗ್ಯ ಇಲಾಖೆ ರೋಗಿಗಳ ದತ್ತು ಸ್ವೀಕಾರದಂಥ ಹೊಸ ಕಾರ್ಯಕ್ರಮವೊಂದಕ್ಕೆ ಮುನ್ನುಡಿ ಬರೆದಿದೆ. ಇದು ರಾಜ್ಯ ಆರೋಗ್ಯ ಇಲಾಖೆಯ ಗಮನ ಸೆಳೆದಿದ್ದು, ರಾಜ್ಯಾದ್ಯಂತ ವಿಸ್ತರಿಸಲು ರಾಜ್ಯ ಕ್ಷಯರೋಗ ಘಟಕ ಮುಂದಾಗಿದೆ. ಜಿಲ್ಲೆಯಲ್ಲಿ 421 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಶೇ.65 ಮಂದಿ ಬಡತನ ರೇಖೆಗಿಂತ ಕೆಳಗಿರುವವರು. ಈಗಾಗಲೆ 6 ತಿಂಗಳ ಅವಧಿಗೆ 32 ರೋಗಿಗಳನ್ನು ದತ್ತು ಪಡೆಯಲಾಗಿದೆ. ದಾನಿಗಳು 1 ತಿಂಗಳ ಮಟ್ಟಿಗೆ 60 ರೋಗಿಗಳಿಗೆ ಸಹಾಯಹಸ್ತ ಚಾಚಿದ್ದಾರೆ.

6 ತಿಂಗಳ ಪಾಲನೆ ಹೊಣೆ: ಕ್ಷಯಕ್ಕೆ ಉಚಿತ ಔಷಧ ನೀಡಲಾಗುತ್ತಿದೆ. ಜತೆಗೆ ಪ್ರತಿ ತಿಂಗಳು 500 ರೂ. ಗೌರವಧನ ನೀಡಲಾಗುತ್ತಿದೆ. ಆದರೆ ಇಂಥ ರೋಗಿಗಳು ಔಷಧೋಪಚಾರಕ್ಕೆ ಸ್ಪಂದಿಸಲು ಪ್ರಮುಖವಾಗಿ ಪೌಷ್ಟಿಕಾಂಶಯುಕ್ತ ಆಹಾರ ಪದ್ಧತಿ ಆವಶ್ಯಕ. ಈ ದೃಷ್ಟಿಯಿಂದ ಸರ್ಕಾರ ನೀಡುವ ಅತ್ಯಲ್ಪ ಗೌರವಧನ ಸಾಲುವುದಿಲ್ಲ. ರೋಗ ತಗುಲಿದ ವ್ಯಕ್ತಿಗೆ ಕನಿಷ್ಠ 6 ತಿಂಗಳು ಚಿಕಿತ್ಸೆ ನೀಡಬೇಕು. ದತ್ತು ಸ್ವೀಕರಿಸಿದವರು ಅಷ್ಟೂ ದಿನದವರೆಗೆ ರೋಗಿಗಳ ಪಾಲನೆ ಹೊಣೆ ಹೊರುತ್ತಾರೆ. ಇದರಿಂದ ಸೋಂಕಿತರು ಸಂಪೂರ್ಣ ಗುಣಮುಖರಾಗಲು ಸಾಧ್ಯವಾಗುತ್ತದೆ ಎಂಬುದು ಇಲಾಖೆ ಅಭಿಪ್ರಾಯವಾಗಿದೆ.

ಪಂಚಾಯಿತಿವಾರು ಕಾರ್ಯಕ್ರಮ: ಪ್ರತಿ ಪಂಚಾಯಿತಿವಾರು ಕಾರ್ಯಕ್ರಮ ಆಯೋಜಿಸುತ್ತಿದ್ದು, ಜನಪ್ರತಿನಿಧಿಗಳಿಂದ ಹಿಡಿದು, ಕೈಗಾರಿಕೋದ್ಯಮಿಗಳು ಮತ್ತಿತರ ದಾನಿಗಳ ಗಮನಸೆಳೆಯಲು ಯತ್ನಿಸಲಾಗುತ್ತಿದೆ. ಆರ್ಥಿಕ ನೆರವು ಪಡೆದು ದವಸ-ಧಾನ್ಯದ ಆಹಾರಕಿಟ್ ರೂಪದಲ್ಲಿ ರೋಗಿಗಳ ಮನೆಬಾಗಿಲಿಗೇ ತಲುಪಿಸುವ ಕಾರ್ಯವನ್ನು ಇಲಾಖೆ ಆರಂಭಿಸಿದೆ.

ಜಿಲ್ಲೆಯಲ್ಲಿ ಕ್ಷಯ ರೋಗಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಗಮನ ಸೆಳೆದಿದೆ. 2025ರೊಳಗೆ ಪ್ರಧಾನಿ ನರೇಂದ್ರ ಮೋದಿ ಅವರ ಕ್ಷಯಮುಕ್ತ ಭಾರತ ನಿರ್ವಣದ ಮಹತ್ವಾಕಾಂಕ್ಷೆಗೆ ಇದು ಪೂರಕವಾಗಿದೆ. ರಾಜ್ಯಾದ್ಯಂತ ವಿಸ್ತರಿಸುವ ಚಿಂತನೆ ಇದ್ದು, ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ. | ಡಾ. ಅನಿಲ್ ಉಪನಿರ್ದೇಶಕ, ರಾಜ್ಯ ಕ್ಷಯರೋಗ ಘಟಕ ಪೌಷ್ಟಿಕ ಆಹಾರ ಕೊರತೆಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ರೋಗಾಣು ಬೇಗನೇ ದೇಹದ ಇತರ ಭಾಗಗಳಿಗೂ ಹಬ್ಬುತ್ತದೆ. ಜತೆಗೆ ಅಂಗಾಂಗಗಳನ್ನು ದುರ್ಬಲಗೊಳಿಸುತ್ತದೆ. ಕೆಲವೊಮ್ಮೆ ಔಷಧೋಪಚಾರ ಸರಿಯಾಗಿದ್ದರೂ ಪೌಷ್ಟಿಕ ಆಹಾರ ಕೊರತೆಯಿಂದ ರೋಗಿಯ ಚೇತರಿಕೆ ಕಷ್ಟಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ದತ್ತು ಸ್ವೀಕಾರ ಕ್ಷಯರೋಗ ನಿಮೂಲನೆಗೆ ಸಹಕಾರಿಯಾಗಲಿದೆ. | ಡಾ.ನಾಗೇಶ್ ಜಿಲ್ಲಾ ಕ್ಷಯರೋಗ ಘಟಕದ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net