

ಹುಬ್ಬಳ್ಳಿ: ರಾಜಕಾರಣಿ ಹಾಗೂ ಚಿತ್ರನಟಿ ಉಮಾಶ್ರೀ ಅವರ ಕಾರು ಹಾಗೂ ಇನ್ನೊಂದು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರಿಗೆ ಗಂಭೀರವಾದ ಗಾಯಗಳಾಗಿವೆ.
ಶುಕ್ರವಾರ ರಾತ್ರಿ ಈ ಅಪಘಾತ ಸಂಭವಿಸಿದ್ದು, ಚಿತ್ರನಟಿ ಉಮಾಶ್ರೀ ಅವರ ಕಾರು ಹುಬ್ಬಳ್ಳಿಯಿಂದ ಗದಗಕ್ಕೆ ಹಾಗೂ ಇನ್ನೊಂದು ಕಾರು ಗದಗದಿಂದ ಹುಬ್ಬಳ್ಳಿ ಕಡೆಗೆ ಹೊರಟಿತ್ತು. ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಬಳಿ ಓವರ್ ಟೇಕ್ ವೇಳೆ ಈ ಅಪಘಾತ ಸಂಭವಿಸಿದೆ.
ಒಂದು ಕಾರು ನಟಿ ಉಮಾಶ್ರೀ ಅವರಿಗೆ ಸೇರಿದ್ದರೂ ಕಾರಿನಲ್ಲಿ ಅವರು ಇರಲಿಲ್ಲ. ಉಮಾಶ್ರೀ ಅವರನ್ನು ಬಿಟ್ಟು ಚಾಲಕ ತನ್ನೂರಿಗೆ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಪ್ರಕರಣದಲ್ಲಿ ಮೃತಪಟ್ಟವರ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ. ಈ ಅಪಘಾತದಲ್ಲಿ ನವಲಗುಂದದ ವೈದ್ಯಾಧಿಕಾರಿ ಸ್ಮಿತಾ ಕಟ್ಟಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.