ಬಳ್ಳಾರಿ ಜೈಲಿನ ರೂಲ್ಸ್​ಗೆ ಬೆಂಡಾದ ದರ್ಶನ್; ಇದೊಂದು ಕಾರಣಕ್ಕಾದರೂ ಬೇರೆ ಕಡೆ ಶಿಫ್ಟ್​ ಮಾಡಿ ಎಂದ 'ದಾಸ'

Darshan Arrest
Published on

ಬಳ್ಳಾರಿ: ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪದ ಮೇಲೆ ನಟ ದರ್ಶನ್​ರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದ್ದು, ಇದೀಗ ನಟ ದರ್ಶನ್​ ಜೈಲಿನ ಅಧಿಕಾರಿಗಳ ಬಳಿ ಹೊಸ ಬೇಡಿಕೆಯೊಂದನ್ನು ಇರಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್​ಗಳಾದ ವಿಲ್ಸನ್‌ ಗಾರ್ಡನ್‌ ನಾಗನ ಜೊತೆ ಕುಳಿತು ದರ್ಶನ್‌ ಒಂದು ಕೈಯಲ್ಲಿ ಸಿಗರೇಟ್‌ ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದು ಹರಟೆ ಹೊರೆಯುತ್ತಿರುವ ಫೋಟೋ ಹಾಗೂ ವಿಐಪಿ ಸೆಲ್‌ನಿಂದಲೇ ವಿಡಿಯೋ ಕಾಲ್‌ನಲ್ಲಿ ಮಾತನಾಡಿರುವ ವಿಡಿಯೋ ಭಾರೀ ವೈರಲ್‌ ಆಗಿತ್ತು. ಬಳಿಕ ಎಚ್ಚೆತ್ತ ಸರ್ಕಾರ ಪರಪ್ಪನ ಅಗ್ರಹಾರದ ಜೈಲಾಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶಿಸಿತ್ತು.

ಕೋರ್ಟ್‌ ಆದೇಶದ ಮೇರೆಗೆ ಪೊಲೀಸರು ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿತ್ತು. ಬಳ್ಳಾರಿ ಜೈಲಿನ ಹೈ ಸೆಕ್ಯೂರಿಟಿ ಪ್ರಿಸನ್​ ಸೆಲ್​ನಲ್ಲಿ ನಟ ದರ್ಶನ್​ರನ್ನು ಇರಿಸಲಾಗಿದ್ದು, ನಿನ್ನೆ (ಸೆಪ್ಟೆಂಬರ್​ 12) ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್​ ಹಾಗೂ ವಕೀಲರನ್ನು ಭೇಟಿ ಮಾಡಿದ್ದರು. ಭೇಟಿ ಬಳಿಕ ವಾಪಾಸ್‌ ತೆರಳುವಾಗ ಮಧ್ಯದ ಬೆರಳನ್ನು ತೋರಿಸುವ ಮೂಲಕ ಅಸಭ್ಯ ವರ್ತನೆ ತೋರಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇತ್ತ ಬಳ್ಳಾರಿ ಜೈಲಿನ ನಿಯಮಗಳಿಗೆ ನಟ ದರ್ಶನ್​ ಬೆಂಡಾಗಿದ್ದು, ಬೇರೆ ಜೈಲಿಗೆ ಸ್ಥಳಾಂತರಿಸುವಂತೆ ಮನವಿ ಮಾಡಿರುವುದಾಗಿ ವರದಿಯಾಗಿದೆ. ಕುಟುಂಬಸ್ಥರು ಬೆಂಗಳೂರಿನಿಂದ ಬರೋದು ಕಷ್ಟವಾಗುತ್ತದೆ. ವಾರಕ್ಕೆ ಒಮ್ಮೆ ಬಂದ್ರು 5 ರಿಂದ 6 ತಾಸು ಜರ್ನಿ ಮಾಡಿಕೊಂಡ ಬರಬೇಕು. ಹೀಗಾಗಿ ಬೆಂಗಳೂರು ಸುತ್ತಮುತ್ತಲಿನ ಜೈಲಿಗೆ ಶಿಪ್ಟ್ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಇಂದು (ಸೆಪ್ಟೆಂಬರ್​ 13) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಈ ಮನವಿ ಪುರಸ್ಕಾರ ಆಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net