ನಾವೇನು ಮಾಡಿದ್ದೀವಿ ಅಂತ ನಮ್ಮನ್ನು ಕೇಳಿ, ನಾವೇ ಹೇಳ್ತೀವಿ; ವಿಡಿಯೋ ಮಾಡಿ ಕ್ಲಾರಿಟಿ ಕೊಟ್ಟ ನಟ ವರುಣ್​ ಆರಾಧ್ಯ

Varun Varsha
Published on

ಬೆಂಗಳೂರು: ಮಾಜಿ ಪ್ರೇಯಸಿಯ ಖಾಸಗಿ ಫೋಟೋ ಹಾಗೂ ವಿಡಿಯೋವನ್ನು ಲೀಕ್​ ಮಾಡುವುದಾಗಿ ಬ್ಲ್ಯಾಕ್​ಮೇಲ್​ ಮಾಡಿದ ಆರೋಪದ ಮೇರೆಗೆ ಸೋಶಿಯಲ್​ ಮೀಡಿಯಾ ಸ್ಟಾರ್​, ಬೃಂದಾವನ ಸೀರಿಯಲ್ ಖ್ಯಾತಿಯ ನಟ ವರುಣ್​ ಆರಾಧ್ಯ ವಿರುದ್ಧ ಬೆಂಗಳೂರು ಪಶ್ಚಿಮ ವಿಭಾಗದ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ವರ್ಷಾ ಕಾವೇರಿ ದೂರು ದಾಖಲಿಸಿದ್ದರು ಎಂದು ಈ ಹಿಂದೆ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಮಾಜಿ ಪ್ರೇಯಸಿ ವರ್ಷಾ ಕಾವೇರಿ ಇದು ಸುಳ್ಳು ಎಂದು ಹೇಳುವ ಮೂಲಕ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದರು.

ವರ್ಷಾ ಕಾವೇರಿ, ವರುಣ್ ಆರಾಧ್ಯ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು, ಖಾಸಗಿ ಫೊಟೊಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಎಫ್​ಐಆರ್ ದಾಖಲಾಗಿದೆ ಎಂದು ವರದಿಯಾಗಿತ್ತು. ಆದರೆ ವರದಿಗಳು ಪ್ರಸಾರವಾದ ಬಳಿಕ, ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ವರ್ಷಾ, ಆರೋಪ ಸುಳ್ಳು, ತಾನು ಹಾಗೆ ದೂರು ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ತಮ್ಮ ಮೇಲೆ ಬಂದಿರುವ ಆರೋಪದ ಕುರಿತು ಸ್ಪಷ್ಟನೆ ನೀಡಿರುವ ನಟ ವರುಣ್​ ಆರಾಧ್ಯ ನನ್ನ ಮೇಲೆ ಮಾಡಲಾಗಿರುವ ಆರೋಪಗಳು ಶುದ್ಧ ಸುಳ್ಳು ಎಂದು ಹೇಳಿದ್ದಾರೆ.

ಹಳವು ವರ್ಷಗಳಿಂದ ನಾನು ಮತ್ತು ವರ್ಷಾ ಒಟ್ಟಿಗೆ ಇನ್​ಸ್ಟಾಗ್ರಾಂ ರೀಲ್ಸ್ ಮಾಡುತ್ತಿದ್ದೆವು, ಅವರ ಹಲವಾರು ಚಿತ್ರಗಳು, ಒಟ್ಟಿಗೆ ಮಾಡಿದ್ದ ರೀಲ್ಸ್ ವಿಡಿಯೋಗಳು ನನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿವೆ. ಈಗ ನಾವು ದೂರಾಗಿದ್ಧೇವೆ. ಹೀಗಾಗಿ ಅವುಗಳನ್ನು ತೆಗೆಯುವಂತೆ ವರ್ಷಾ ಹೇಳಿದ್ದಳು, ಆದರೆ ನನಗೆ ಸಮಯ ಸಿಗದ ಕಾರಣ ನಾನು ಅವುಗಳನ್ನು ತೆಗೆದಿರಲಿಲ್ಲ. ಅದೇ ವಿಷಯವಾಗಿ ವರ್ಷಾ ವಕೀಲರ ಸಮ್ಮುಖದಲ್ಲಿ ಮಾತನಾಡಿ, ಚಿತ್ರಗಳನ್ನು ತೆಗೆಯುವಂತೆ ಸೂಚಿಸಲಾಯ್ತು. ವರ್ಷಾಗೆ ಮದುವೆ ನಿಶ್ಚಯವಾಗುತ್ತಿದ್ದು, ಅದಕ್ಕೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಚಿತ್ರಗಳನ್ನು ತೆಗೆಯಲು ಹೇಳಿದ್ದರು ಅಷ್ಟೆ. ವಿನಃ ಯಾವುದೇ ಬೆದರಿಕೆ ಆಗಲಿ, ಖಾಸಗಿ ಫೊಟೊಗಳಾಗಲಿ ಇಲ್ಲ ಎಂದು ಹೇಳಿದ್ದಾರೆ.

Varun Varsha Breakup

ಜೀವನದಲ್ಲಿ ಬೆಳೆಯುತ್ತಿರುವ ಸಮಯದಲ್ಲಿ ಪದೇ ಪದೇ ಬಂದು ಅಡ್ಡಗಾಲು ಹಾಕುತ್ತಿದ್ದೀರಿ. ಬೃಂದಾವನ ಸೀರಿಯಲ್​​ನಲ್ಲಿ ನಟಿಸುತ್ತಿರುವ ಖ್ಯಾತ ನಟ ವರುಣ್ ಆರಾಧ್ಯ, ಕೊಲೆ ಬೆದರಿಕೆ, ಬ್ಲ್ಯಾಕ್​ ಮೇಲ್ ಮಾಡಿದ್ದಾನೆ, ಆತನ ವಿರುದ್ಧ ದೂರು ದಾಖಲಾಗಿದೆ, ಅರೆಸ್ಟ್ ಮಾಡಲಾಗಿದೆ. ಎಫ್‌ಐಆರ್ ಹಾಕಿದ್ದಾರೆ, ಜೈಲಿಗೆ ಹಾಕಿದ್ದಾರೆ ಎಂದೆಲ್ಲ ಪ್ರಸಾರವಾಗುತ್ತಿದೆ. ಈ ಸುಳ್ಳು ಸುದ್ದಿಗಳನ್ನು ಯಾಕೆ ಹಾಕುತ್ತಿದ್ದೀರ ಎಂಬುದು ಅರ್ಥವಾಗುತ್ತಿಲ್ಲ. ನಾನು ಆರಾಮಾಗಿ ಮನೆಯಲ್ಲೇ ಇದ್ದೀನಿ. ಅವರ ಪಾಡಿಗೆ ಅವರು ಇದ್ದಾರೆ. ನಾವೇನು ಮಾಡಿದ್ದೀವಿ ಅಂತ ನಮ್ಮನ್ನು ಕೇಳಿ, ನಾವೇ ಹೇಳುತ್ತೀವಿ ಎಂದು ವರುಣ್​ ಆರಾಧ್ಯ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಕಣ್ಣೀರು ಹಾಕಿದ್ಧಾರೆ.

ಏನೆಂದರೆ 2018ರಂದು ನಾವಿಬ್ಬರು ಕ್ಲೋಸ್ ಆಗಿದ್ದಾಗ ಮಾಡಿದ್ದ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಲು ಮನವಿ ಮಾಡಿದ್ದರು. ನಾನು ಬ್ಯುಸಿ ಇದ್ದ ಕಾರಣ ಪ್ರತಿಯೊಂದನ್ನು ಡಿಲೀಟ್ ಮಾಡಿರಲಿಲ್ಲ ಸ್ವಲ್ಪ ಮಾಡಿದ್ದೆ. ನಮ್ಮ ಫ್ಯಾನ್ ಪೇಜ್‌ಗಳು ಅದನ್ನು ಪದೇ ಪದೇ ಪೋಸ್ಟ್ ಮಾಡುತ್ತಿರುವ ಕಾರಣ ಮನವಿ ಮಾಡಿದ್ದರು. ಇದರಿಂದ ಅವರು ಮದುವೆ ಆದರೆ ಸಮಸ್ಯೆ ಆಗುತ್ತದೆ ಅಥವಾ ಮುಂದೆ ನಾನು ಮದುವೆ ಆಗುವ ಸಮಯ ಬಂದಾಗ ತೊಂದರೆ ಆಗುತ್ತದೆ ಎಂದು ಈ ನಿರ್ಧಾರ ತೆಗೆದುಕೊಂಡಿರುವುದು. ಠಾಣೆಯಲ್ಲಿ ಇಬ್ಬರು ಪರಸ್ಪರ ಮಾತನಾಡಿಕೊಂಡು ಪೊಲೀಸರ ಮುಂದೆನೇ ಡಿಲೀಟ್ ಮಾಡಿದ್ದೀವಿ. ನನ್ನ ಜೀವನ ಮುಂದೆ ನಡೆಯಬೇಕು. ನಮ್ಮ ಮನೆಯಲ್ಲಿ ಅಮ್ಮ ಅಕ್ಕ ಮತ್ತು ಪ್ರತಿಯೊಬ್ಬರು ಸಿಕ್ಕಾಪಟ್ಟೆ ನೊಂದಿದ್ದಾರೆ. ಏನೂ ತಪ್ಪು ಮಾಡಿಲ್ಲ ಅಂದ್ರೂ ಪದೇ ಪದೇ ನನ್ನ ಮೇಲೆ ಕಪ್ಪು ಹೇಳಿಕೆಗಳನ್ನು ಹಾಕುತ್ತಲೇ ಇದ್ದಾರೆ. 

ನಮ್ಮ ಮನೆಯಲ್ಲಿ ಅಮ್ಮ ಅಕ್ಕ ಮತ್ತು ಪುಟ್ಟ ಹುಡುಗಿ ಇದ್ದಾಳೆ. ನಾನು ಯಾಕೆ ಬೇರೆ ಅವರ ಮನೆ ಹೆಣ್ಣುಮಗಳ ಮೇಲೆ ಆ ರೀತಿ ವರ್ತಿಸಲಿ. ಮನೆಯವರಿಗೆ ಬೇಸರ ಆದಾಗ ಕೈ ಕಾಲು ನಡುಗುತ್ತದೆ. ಕೈ ಮುಗಿದು ಕೇಳಿಕೊಳ್ಳುತ್ತೀನಿ. ನನ್ನನ್ನು ಇಲಿವರೆಗೂ ಬೆಳೆಸಿಕೊಂಡು ಬಂದಿದ್ದೀರಾ ಜೀವನದಲ್ಲಿ ಇನ್ನು ಸಾಧನೆ ಮಾಡಬೇಕು ಅನ್ನೋದು ನನ್ನ ಗುರಿಯಾಗಿದೆ. ಅದು ಬಿಟ್ಟು ನಾನು ಬ್ಲ್ಯಾಕ್​ಮೇಲ್ ಮಾಡುವುದು ಅದು ಇದು ಏನೂ ಇಲ್ಲ. ಏನೋ ಸಣ್ಣ ಗೊಂದಲದಿಂದ ನಾವು ಬ್ರೇಕಪ್ ಮಾಡಿಕೊಂಡಿರುವುದು ಅವರು ಬೇರೆ ಜೀವನ ನಡೆಸುತ್ತಿದ್ದಾರೆ. ನಾನು ಬೇರೆ ಜೀವನ ನಡೆಸುತ್ತಿರುವೆ. ತುಂಬಾ ಹಳೆಯ ವಿಡಿಯೋ ಮತ್ತು ಫೋಟೋಗಳನ್ನು ಡಿಲೀಟ್ ಮಾಡಿಲು ಹೇಳಿರುವುದು. ಜೀವನದಲ್ಲಿ ನಾವು ಮುಂದೆ ಬರಬೇಕು ತಲೆ ಕೆಡಿಸಿಕೊಂಡು ಕೆಲಸ ಮಾಡುತ್ತಿದ್ದೀನಿ ಎಂದು ವರುಣ್​ ಆರಾಧ್ಯ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net