

ಬೆಂಗಳೂರು: ಹತ್ತು ವರ್ಷಗಳ ಹಿಂದೆ ನಡೆದಿದ್ದ ಅಪಘಾತಕ್ಕೆ ಸಂಬಂಧಿಸಿದ ಆರೋಪಿ, 9 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದು ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಆಸಕ್ತಿಕರ ಅಂಶವೆಂದರೆ ಪೊಲೀಸರು ಕುಡುಕರ ಸೋಗಿನಲ್ಲಿ ಹೋಗಿ ಈತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಆಂಥೋನಿ ರಾಜ್ (44) ಎಂಬಾತ ಬಂಧಿತ ಆರೋಪಿ. ಟ್ರ್ಯಾಕ್ಟರ್ ಓಡಿಸುತ್ತಿದ್ದ ಈತ ಹತ್ತು ವರ್ಷಗಳ ಹಿಂದೆ ಆಟೋಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕೌಸಲ್ ಕುಮಾರ್ (8) ಎಂಬ ಬಾಲಕ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಮೃತಪಟ್ಟಿದ್ದ. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಪೂಜಿ ನಗರ ಐದನೇ ಮುಖ್ಯರಸ್ತೆಯಲ್ಲಿ ಈ ಅಪಘಾತ ಸಂಭವಿಸಿತ್ತು.
ಈ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆಂಥೋನಿಗೆ 2012ರಲ್ಲಿ 10 ತಿಂಗಳು 15 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶವಾಗಿತ್ತು. ಆದರೆ ಆಂಥೋನಿ ಅಷ್ಟರಲ್ಲೇ ತಲೆಮರೆಸಿಕೊಂಡಿದ್ದ. ಮದ್ಯವ್ಯಸನಿ ಆಗಿದ್ದ ಆಂಥೋನಿ ತನ್ನ ವಿಳಾಸ ಬದಲಿಸಿಕೊಂಡು ರಿಹ್ಯಾಬಿಲಿಟೇಷನ್ ಸೆಂಟರ್ವೊಂದಕ್ಕೆ ಸೇರಿಕೊಂಡಿದ್ದ. ಮತ್ತೊಂದೆಡೆ ಆರೋಪಿಗಾಗಿ ವರ್ಷಗಟ್ಟಲೆ ಹುಡುಕಾಡಿ ಪೊಲೀಸರು ಸುಸ್ತಾಗಿದ್ದರು.
ಅದಾಗ್ಯೂ ಬಿಡದ ಪೊಲೀಸರು ಆಂಥೋನಿ ಸಹೋದರರ ಬಳಿ ಮಾಹಿತಿ ಕಲೆ ಹಾಕಿ, ಸೋಮನಹಳ್ಳಿಯ ಸೇಂಟ್ ಮದರ್ ತೆರೆಸಾ ರಿಹ್ಯಾಬ್ ಸೆಂಟರ್ನಲ್ಲಿ ಆಂಥೋನಿ ಇರುವ ಕುರಿತು ವಿವರ ಪಡೆದಿದ್ದರು. ಪುಟ್ಟಮಲ್ಲಯ್ಯ ಎಂಬ ಪೇದೆಯನ್ನು ಮದ್ಯವ್ಯಸನಿ ಎಂದು ಬಿಂಬಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಅವರನ್ನು ರಿಹ್ಯಾಬ್ ಸೆಂಟರ್ಗೆ ಸೇರಿಸುವ ನೆಪದಲ್ಲಿ ಅಲ್ಲಿಗೆ ತೆರಳಿ ಆಂಥೋನಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಈ ಮೂಲಕ ಆಂಥೋನಿಯನ್ನು ಗುರುತಿಸಿ ವಶಕ್ಕೆ ಪಡೆದ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.