ಯಾದಗಿರಿಯ ಶಿಕ್ಷಕ ಒಂದಲ್ಲ, ಎರಡಲ್ಲ, ಮೂವರು ಹೆಂಡ್ತೀರ ಗಂಡ! ಇಬ್ಬರಿಗೆ ಕೈ ಕೊಟ್ಟು 3ನೇ ಹೆಂಡ್ತಿ ಜತೆ ಸಂಸಾರ... ಕೊನೆಗೂ ಆಯ್ತು ಶಾಸ್ತಿ

wedding fraud
Published on

ಯಾದಗಿರಿ: ಇಲ್ಲೊಬ್ಬ ಶಿಕ್ಷಕ ಸುಳ್ಳು ಹೇಳಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂವರನ್ನು ಮದ್ವೆ ಆಗಿದ್ದಾನೆ. ಈ ವಿಚಾರ ಪರಸ್ಪರ ಪತ್ನಿಯರಿಗೂ ಗೊತ್ತಾಗದಂತೆ ಹಲವು ವರ್ಷ ಸಂಸಾರ ನಡೆಸಿದ ಇದೀಗ ಸಿಕ್ಕಿಬಿದ್ದಿದ್ದಾನೆ.

ಆ ಭೂಪನ ಹೆಸರು ಮೋಹನರೆಡ್ಡಿ ಪಾಟೀಲ್. ಯಾದಗಿರಿ ತಾಲೂಕಿನ ನಿಲನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದ. ಮೂರು ಮದ್ವೆಯಾದ ವಿಚಾರ ತಿಳಿಯುತ್ತಿದ್ದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

ಮೋಹನರೆಡ್ಡಿ ಪಾಟೀಲ್ 1988ರಲ್ಲಿ ಮದುವೆ ಆಗಿದ್ದ. 1992ರಲ್ಲಿ ಎರಡನೇ ಮದುವೆ ಆಗಿದ್ದ. ಎರಡು ಮದುವೆ ಆಗಿರುವ ವಿಚಾರ ಬಚ್ಚಿಟ್ಟು 2007ರಲ್ಲಿ ಮತ್ತೊಬ್ಬಳನ್ನ ಕೈಹಿಡಿದಿದ್ದ. ಮೊದಲ ಮತ್ತು ಎರಡನೇ ಹೆಂಡತಿಯರಿಗೆ ಕೈ ಕೊಟ್ಟು ಮೂರನೇ ಹೆಂಡ್ತಿ ಜತೆ ಸಂಸಾರ ನಡೆಸುತ್ತಿದ್ದ.

ತಮ್ಮ ಗಂಡ ಮೂರನೇ ಮದ್ವೆ ಆಗಿದ್ದಾನೆ ಎಂಬ ವಿಚಾರ ಮೊದಲ ಮತ್ತು 2ನೇ ಪತ್ನಿಯರಿಗೆ ತಿಳಿದಿದೆ. ಅವರಿಬ್ಬರೂ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಸರ್ಕಾರಿ ಶಾಲೆ ಶಿಕ್ಷಕ 3 ಮದ್ವೆ ಆಗಿದ್ದಾನೆ ಎಂಬ ವಿಚಾರ ತಿಳಿದು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಕಾನೂನು ಬಾಹಿರವಾಗಿ ಮದ್ವೆಯಾದ ಶಿಕ್ಷಕನನ್ನು ಕೆಲಸದಿಂದ ಅಮಾನತು ಮಾಡಿ ಡಿಡಿಪಿಐ ಶಾಂತಗೌಡ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net