

ಬೆಳಗಾವಿ: ಅನೈತಿಕ ಸಂಬಂಧಗಳು ಅದೆಷ್ಟೋ ಕುಟುಂಬಗಳನ್ನೇ ನಾಶ ಮಾಡಿರುವ ಕಥೆಗಳನ್ನು ಕೇಳಿರುತ್ತೀರಿ. ಅದೇ ರೀತಿ ಮದುವೆಯಾಗಿದ್ದರೂ ಬೇರೆಯವನೊಂದಿಗೆ ಸಂಬಂಧ ಬೆಳೆಸಿಕೊಂಡ ಮಹಿಳೆಯೊಬ್ಬಳು, ಆತನೊಂದಿಗೇ ಸೇರಿಕೊಂಡು ಗಂಡನ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಕೊಲೆಯನ್ನು ಮುಚ್ಚಿ ಹಾಕಲು ಆಕೆ ಮಾಡಿದ ಪ್ಲಾನ್ ಕೂಡ ಅಷ್ಟೇ ರೋಚಕವಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಲಕ್ಷ್ಮಣ ತಿಪ್ಪಣ್ಣಾ ಪುಂಜಿ (38) ಕೊಲೆಯಾಗಿರುವ ದುರ್ದೈವಿ. ಈತನ ಪತ್ನಿ ಉದ್ದವ್ವ ಪುಂಜಿಗೆ ಅರ್ಜುನ್ ಆರೇರ್ ಹೆಸರಿನ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿತ್ತು. ಅವರಿಬ್ಬರ ಸಂಬಂಧಕ್ಕೆ ಗಂಡ ಲಕ್ಷ್ಮಣ ಅಡ್ಡಿಯೆನಿಸತೊಡಗಿದ್ದ. ಅದಕ್ಕಾಗಿ ಹೆಂಡತಿ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾಳೆ.
ಜಮೀನಿನಲ್ಲಿದ್ದ ತಮ್ಮ ಮನೆಗೆ ಕಳೆದ ಬುಧವಾರದಂದು ಪ್ರಿಯಕರನನ್ನು ಬರಲು ಹೇಳಿದ್ದಾಳೆ. ಆತ ಬಂದ ನಂತರ ಇಬ್ಬರೂ ಸೇರಿ ಲಕ್ಷ್ಮಣನ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾರೆ. ನಂತರ ಆತನ ಮೃತದೇಹವನ್ನು ಬೈಕ್ನಲ್ಲಿ ಎತ್ತಿಕೊಂಡು ಘಟಪ್ರಭಾ ಕಾಲುವೆ ಬಳಿಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಗಂಡನ ಶವ ಮತ್ತು ಆತನ ಬೈಕ್ ಎರಡನ್ನೂ ಕಾಲುವೆಗೆ ಎಸೆದಿದ್ದಾರೆ. ನಂತರ ಅಲ್ಲಿಂದ ಮನೆಗೆ ಬಂದು ಏನೂ ಗೊತ್ತಿಲ್ಲದವರಂತೆ ಸುಮ್ಮನಾಗಿದ್ದಾರೆ. ನೋಡುವವರ ಕಣ್ಣಿಗೆ ಇದೊಂದು ಅಪಘಾತದಂತೆ ಕಾಣುವಂತೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಲಕ್ಷ್ಮಣ ಕಾಣದಿದ್ದರ ಬಗ್ಗೆ ಆತನ ಅಣ್ಣ ಬಾಲಪ್ಪ ತಿಪ್ಪಣ್ಣ ಪುಂಜಿ ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ನಡೆದ ಘಟನೆ ಹೊರಗೆ ಬಿದ್ದಿದೆ.