ಒಬ್ಬಳನ್ನೇ ಮದ್ವೆಯಾದ ಇಬ್ಬರು! ಆ.28ರ ರಾತ್ರಿ ಮಾಡಬಾರದ್ದು ಮಾಡಲು ಹೋಗಿ ಸಿಕ್ಕಿಬಿದ್ದ 2ನೇ ಪತಿ

wedding fraud cheating
Published on

ಕಡೂರು: ಒಬ್ಬಳೇ ಯುವತಿಯನ್ನು ಮದುವೆಯಾದ ಯುವಕರಿಬ್ಬರ ನಡುವಿನ ಜಗಳ ಇದು. ಆಕೆಯ ಮೊದಲ ಗಂಡನನ್ನು ಅಪಹರಿಸಿ ಹತ್ಯೆ ಮಾಡಲು ಯತ್ನಿಸಿದ ಎರಡನೇ ಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಏನಿದು ಪ್ರಕರಣ?: ಚಿಕ್ಕಮಗಳೂರು ಜಿಲ್ಲೆ ಕಡೂರು ಸಿಪಿಸಿ ಕಾಲನಿಯ ದಿನಸಿ ವ್ಯಾಪಾರಿ ಮೋಹನ್​ರಾಮ್​ ಐದು ವರ್ಷದ ಹಿಂದೆ ರಾಜಸ್ಥಾನದ ಮಂಜುಳಾ ಎಂಬಾಕೆಯನ್ನು ಜೋಧ್​ಪುರದಲ್ಲಿಯೇ ಪ್ರೀತಿಸಿ ಮದುವೆಯಾಗಿದ್ದ. ಬಳಿಕ ಕಡೂರಿಗೆ ಕರೆತಂದಿದ್ದ. ಎರಡು ತಿಂಗಳ ನಂತರ ಮಂಜುಳಾ ತವರಿಗೆ ಹೋಗಿದ್ದಳು. ಕೆಲ ದಿನಗಳ ನಂತರ ಪತ್ನಿಯನ್ನು ಕರೆತರಲು ಮೋಹನ್​ ರಾಮ್​ ಹೋಗಿದ್ದ. ಆದರೆ ಆಕೆ ಬರಲು ಒಪ್ಪಲಿಲ್ಲ. ಬೇಸತ್ತು ಸುಮ್ಮನಾಗಿದ್ದ.

ಕಳೆದ ತಿಂಗಳು ಮಂಜುಳಾರನ್ನು ಹರಿಯಾಣದ ಓಂಪ್ರಕಾಶ್​ ಎಂಬಾತನ ಜತೆ ಮದುವೆ ಮಾಡಿಕೊಟ್ಟಿರುವುದು ಮೋಹನ್​ಗೆ ಗೊತ್ತಾಗಿದೆ. ಇತ್ತೀಚೆಗೆ ಮಂಜುಳಾಗೆ ಮೆಸೇಜ್​ ಮಾಡಿ ಮದುವೆ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮೋಹನ್​ರಾಮ್​ ಯತ್ನಿಸುತ್ತಿದ್ದ. ಇದನ್ನು ಸಹಿಸದ ಓಂಪ್ರಕಾಶ್​, ತನ್ನ ಪತ್ನಿಯ ಮೊದಲ ಗಂಡನಿಗೆ ಗತಿ ಕಾಣಿಸಬೇಕು ಎಂದು ಸಂಚು ರೂಪಿಸಿದ್ದ.

ಅದರಂತೆ ತನ್ನ ತಂಡದೊಂದಿಗೆ ಕಾರಿನಲ್ಲಿ ಆ.28ರ ರಾತ್ರಿ ಕಡೂರು ಪಟ್ಟಣಕ್ಕೆ ಬಂದು ಮೋಹನ್​ರಾಮ್​ನನ್ನು ಅಪಹರಿಸಿ, ಕಾರಿನಲ್ಲಿಯೇ ಕೊಲೆಗೆ ಯತ್ನಿಸಿದ್ದ. ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿದ್ದುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರನ್ನು ಚೇಸ್​ ಮಾಡಿಕೊಂಡು ಹೋಗುತ್ತಿರುವಾಗ ರಾಷ್ಟ್ರೀಯ ಹೆದ್ದಾರಿಯ ಮತಿಘಟ್ಟ ಬಳಿ ಕಾರು ಕೆಟ್ಟುನಿಂತಿತ್ತು. ಅಷ್ಟರಲ್ಲಿ ಪೊಲೀಸರು ಬಂದು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ಮೂಲದ ಆರೋಪಿಗಳಾದ ಓಂಪ್ರಕಾಶ್​ ಹಾಗೂ ಆತನ ಸಹಚರರಾದ ಶೈಲೇಂದ್ರ, ಪ್ರದೀಪ್​, ದಲ್ಲಾರಾಮ್​, ಜಿತೇಂದ್ರ, ಶಂಕರ್​ ಪಾಟೀಲ್​ ಹಾಗೂ ದಿನೇಶ್​ ಬಂಧಿತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net