‘ರೆಬೆಲ್’ ನಡೆಯಿಂದಾಗಿ ಬಿಜೆಪಿಯಲ್ಲಿ ‘ಏಕಾಂಗಿ’ಯಾದ ಮಾಜಿ ಶಾಸಕ ಸುರೇಶ್​ಗೌಡ

23Tmk_SureshGowda_PC
Published on

| ಜಗನ್ನಾಥ್ ಕಾಳೇನಹಳ್ಳಿ ತುಮಕೂರು

ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿ.ಸುರೇಶ್​ಗೌಡ ಪಕ್ಷದೊಳಗೆ ‘ಏಕಾಂಗಿ’ಯಾಗಿದ್ದಾರೆ. ಜಿಲ್ಲಾ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜು ಹಾಗೂ ಮಾಜಿ ಸಚಿವ ಸೊಗಡುಶಿವಣ್ಣ ಅವರ ಜತೆ ಅಂತರ ಕಾಯ್ದುಕೊಂಡಿರುವ ಸುರೇಶ್​ಗೌಡ ಕ್ಷೇತ್ರಕ್ಕೆ ಸೀಮಿತವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಲು ನಿರ್ಧರಿಸಿದ್ದಾರೆ.

ಬಿಜೆಪಿ ವರಿಷ್ಠರ ಜತೆ ಮುನಿಸಿನಿಂದಲೇ ಜಿಲ್ಲಾಧ್ಯಕ್ಷ ಹುದ್ದೆ ತ್ಯಜಿಸಿರುವ ಸುರೇಶ್​ಗೌಡ ಬಿಎಸ್​ವೈ ಆಪ್ತರೆಂಬ ಕಾರಣಕ್ಕೆ ತನ್ನ ರಾಜೀನಾಮೆ ಪಡೆಯಲಾಗಿದೆ ಎಂದು ಬಿಂಬಿಸಿಕೊಂಡು ಜನರ ಅನುಕಂಪ ಪಡೆಯಲು ಯತ್ನಿಸಿದ್ದಾರೆ. ಈ ರಾಜಕೀಯ ಬೆಳವಣಿಗೆಗಳ ಮಧ್ಯೆ ಜಿಲ್ಲೆಯ ಸ್ವಪಕ್ಷೀಯ ಮುಖಂಡರ ಜತೆ ಬಹಿರಂಗ ಸಂಘರ್ಷಕ್ಕಿಳಿದಿರುವ ಸುರೇಶ್​ಗೌಡ ನಡೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿದೆ.

ಮಾಧುಸ್ವಾಮಿ ವಿರುದ್ಧ ಬಂಡಾಯ: ಜಿಲ್ಲಾ ಸಚಿವ ಜೆ.ಸಿ.ಮಾಧುಸ್ವಾಮಿ ಜತೆಗೆ ಜಿಲ್ಲಾಧ್ಯಕ್ಷ ಜವಾಬ್ದಾರಿ ವಹಿಸಿಕೊಂಡಿದ್ದಾಗಿನಿಂದ ‘ದೂರಾದೂರ’ ಎಂಬಂತಿರುವ ಸುರೇಶ್​ಗೌಡ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಬಂಡಾಯದ ಬಾವುಟ ಹಾರಿಸಿದ್ದಾರೆ. ಬೂದಿ ಮುಚ್ಚಿದ ಕೆಂಡದಂತಿದ್ದ ಅವರಿಬ್ಬರ ನಡುವಿನ ಬಂಡಾಯ ಬೇಗುದಿ ಸ್ಫೋಟಗೊಂಡಿದೆ.

ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಗೂಳೂರು-ಹೆಬ್ಬೂರು ಏತನೀರಾವರಿ ಯೋಜನೆ ಅವೈಜ್ಞಾನಿಕ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ ‘ಅಸ್ತ್ರ’ವನ್ನಾಗಿಟ್ಟುಕೊಂಡು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾವರೆಗೆ ದೂರು ಕೊಂಡೊಯ್ಯುವ ಬೆದರಿಕೆಯೊಡ್ಡಿರುವ ಸುರೇಶ್​ಗೌಡ ಸಹಜವಾಗಿ ಪಕ್ಷದ ಜಿಲ್ಲಾ ಮುಖಂಡರನ್ನು ಒಬ್ಬೊಬ್ಬರನ್ನಾಗಿ ಎದುರುಹಾಕಿಕೊಳ್ಳಲು ಹೊರಟಂತಿದೆ.

ಸಂಸದ ಜಿ.ಎಸ್.ಬಸವರಾಜು ಬಣದ ಜತೆಗೂ ಸಂಬಂಧ ಹಳಸಿಕೊಂಡಿದ್ದು, ಗ್ರಾಮಾಂತರ ಕ್ಷೇತ್ರದ ಮೇಲೆ ಹಿಡಿತ ಹೊಂದಿರುವ ಮಾಜಿ ಸಚಿವ ಸೊಗಡುಶಿವಣ್ಣರ ವಿರೋಧವನ್ನೂ ಕಟ್ಟಿಕೊಂಡಿದ್ದಾರೆ. ಈ ರಾಜಕೀಯ ನಡೆಗಳಿಂದ ಸುರೇಶ್​ಗೌಡ ಪಕ್ಷ ತೊರೆಯುತ್ತಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ನೆಲೆಯೇ ಇಲ್ಲ. ಹಾಗಾಗಿ, ಸ್ವಂತ ಬಲದ ಮೇಲೆ ಪಕ್ಷ ಸಂಘಟನೆ ಕಷ್ಟಸಾಧ್ಯ ಇರುವುದರಿಂದ ಸುರೇಶ್​ಗೌಡ ಪಕ್ಷಾಂತರದ ನಿರ್ಧಾರ ಮಾಡುವುದಿಲ್ಲ ಎಂಬ ಲೆಕ್ಕಾಚಾರ ಇದೆ. ಅವರ ಪಕ್ಷಾಂತರ ವದಂತಿ ಕೇವಲ ರಾಜಕೀಯ ತಂತ್ರಗಾರಿಕೆ ಎಂದೇ ಅಂದಾಜಿಸಲಾಗುತ್ತಿದೆ. ಸುರೇಶ್​ಗೌಡರ ‘ರೆಬೆಲ್’ ನಡೆ ಪಕ್ಷದೊಳಗೆ ಅವರನ್ನು ‘ಏಕಾಂಗಿ’ಯಾಗಿಸಿದೆ.

ಜಿಲ್ಲಾಧ್ಯಕ್ಷ ಸ್ಥಾನ ನನ್ನ ಪಾಲಿಗೆ ಮಡಿಲಲ್ಲಿ ಕೆಂಡಕಟ್ಟಿಕೊಂಡಂತೆ. ಕ್ಷೇತ್ರಕ್ಕೆ ಹೆಚ್ಚು ಸಮಯ ಕೊಡಲಿಕ್ಕೆ ಸಾಧ್ಯವಿರಲಿಲ್ಲ. ಅಲ್ಲದೆ, ನನ್ನ ಜನರ ಕಷ್ಟಗಳಿಗೆ ಸ್ಪಂದಿಸಲಾಗುತ್ತಿಲ್ಲ. ನನ್ನದು ಹೋರಾಟದ ಸ್ವಭಾವ. ಯಾವ ಕಾರಣಕ್ಕೂ ಪಕ್ಷ ತೊರೆಯುವ ಮಾತೇ ಇಲ್ಲ. ಇಲ್ಲೇ ಇದ್ದು ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು ಹೋರಾಟ ಮಾಡುವೆ.

| ಬಿ.ಸುರೇಶ್​ಗೌಡ ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net