More

    ಶಾಸಕ ಶ್ರೀನಿವಾಸ್​ಗೆ ಬಾಗಿಲು ಮುಚ್ಚಿದ ಜೆಡಿಎಸ್! ಕಾಂಗ್ರೆಸ್​ ಜತೆಗಿನ ಹೊಂದಾಣಿಕೆ ಸುಲಭವಲ್ಲ

    ತುಮಕೂರು: ತಿಪಟೂರು ಹೊರತುಪಡಿಸಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿಯೂ ಶಕ್ತಿಯಾಗಿಯೇ ಗುರುತಿಸಿಕೊಂಡಿರುವ ಜೆಡಿಎಸ್ ಗುಬ್ಬಿ ಕ್ಷೇತ್ರದಲ್ಲಿ ಸತತ ನಾಲ್ಕು ಸಲ ಗೆದ್ದಿರುವ ಹಿರಿಯ ನಾಯಕ ಎಸ್.ಆರ್.ಶ್ರೀನಿವಾಸ್​ಗೆ ಕೊಕ್ ನೀಡುವುದು ಬಹುತೇಕ ಖಚಿತವಾಗಿದೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಒಡನಾಟ ಇಟ್ಟುಕೊಂಡಿರುವುದಕ್ಕೆ ಕೆಂಡಾಮಂಡಲವಾಗಿರುವ ದಳಪತಿಗಳು ಶಾಸಕ ಸ್ಥಾನ ಮುಗಿಯುವ ಮೊದಲೇ ಎಸ್.ಆರ್.ಶ್ರೀನಿವಾಸ್ ಹಾಗೂ ಬಿಎಂಎಲ್ ಕಾಂತರಾಜು ಅವರನ್ನು ದೂರವಿಟ್ಟು ಅ.25ರಂದು ಬೃಹತ್ ಸಮಾವೇಶ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ಆಶ್ಚರ್ಯ ಮೂಡಿಸಿದೆ.

    ಗುಬ್ಬಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಖುದ್ದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಭಾಗವಹಿಸುತ್ತಿರುವುದು ಸ್ಥಳೀಯ ಶಾಸಕ ಶ್ರೀನಿವಾಸ್​ಗೆ ಪಕ್ಷದ ಜತೆಗಿರುವ ಸಂಬಂಧ ಕಡಿತಗೊಳಿಸಿಕೊಳ್ಳದೆ ಅನ್ಯಮಾರ್ಗವಿಲ್ಲ ಎನ್ನುವಂತಾಗಿದೆ.

    ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜತೆ ಮುನಿಸಿಕೊಂಡಿದ್ದರೂ ವರಿಷ್ಠ ಎಚ್.ಡಿ.ದೇವೇಗೌಡ ಚುನಾವಣೆ ಸಂದರ್ಭದಲ್ಲಿ ಎಸ್.ಆರ್.ಶ್ರೀನಿವಾಸ್ ಕೈಬಿಡುವುದಿಲ್ಲ ಎಂಬ ವಾಸು ಅಭಿಮಾನಿಗಳ ವಿಶ್ವಾಸ ಠುಸ್ ಎಂದಿದೆ.

    ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿರುವ ಬಿ.ಎಸ್.ನಾಗರಾಜು ಪಕ್ಷ ಸೇರ್ಪಡೆಗೆ ಖುದ್ದು ದೇವೇಗೌಡ ಹಾಗೂ ಕುಮಾರಸ್ವಾಮಿ ಆಗಮಿಸುವ ಮೂಲಕ ಎಸ್.ಆರ್.ಶ್ರೀನಿವಾಸ್​ಗೆ ಜೆಡಿಎಸ್ ಬಾಗಿಲು ಮುಚ್ಚಿದೆ ಎಂಬ ಸಂದೇಶವನ್ನು ಅತೀ ಸುಲಭವಾಗಿ ರವಾನಿಸಲಿದ್ದಾರೆ.

    ‘ಕೈ’ ಜತೆ ಹೊಂದಾಣಿಕೆ ಅಷ್ಟು ಸುಲಭವಲ್ಲ: ಶಾಸಕ ಎಸ್.ಆರ್.ಶ್ರೀನಿವಾಸ್ ಜೆಡಿಎಸ್ ತೊರೆದರೂ ಸ್ಥಳೀಯವಾಗಿ ಎಷ್ಟೇ ವಿರೋಧವಿದ್ದರೂ ಹಾಲಿ ಶಾಸಕರಾದ ಕಾರಣಕ್ಕೆ ಕಾಂಗ್ರೆಸ್​ನಲ್ಲಿ ಸುಲಭವಾಗಿ ಪ್ರವೇಶ ಸಿಗಲಿದೆ. ಆದರೆ, ಪ್ರಾದೇಶಿಕ ಪಕ್ಷದಲ್ಲಿ ನಡೆಸಿದಂತೆ ರಾಜಕೀಯ ಮಾಡಲು ರಾಷ್ಟ್ರೀಯ ಪಕ್ಷಗಳಲ್ಲಿ ಅವಕಾಶವಾಗದು. ಜಿಲ್ಲೆಯಲ್ಲಿ ಕಾಂಗ್ರೆಸ್ ಅಷ್ಟೇನು ಶಕ್ತಿ ಉಳಿಸಿಕೊಂಡಿಲ್ಲ, ಜಿಲ್ಲಾಮಟ್ಟದ ನಾಯಕರುಗಳು ಆಂತರಿಕವಾಗಿ ಒಂದಾಗಿಲ್ಲ ಎಂಬುದು ರಾಜಕೀಯ ಪಡಸಾಲೆಯಲ್ಲಿ ಗುಟ್ಟಾಗಿಯೂ ಉಳಿದಿಲ್ಲ, ಇನ್ನು ಡಿಕೆಶಿ ಗುಂಪಿನಿಂದ ಗುರುತಿಸಿಕೊಂಡು ಕ್ಷೇತ್ರದಲ್ಲಿ ಕಣಕ್ಕಿಳಿಯುವ ಶ್ರೀನಿವಾಸ್​ಗೆ ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಡಾ.ಜಿ.ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಜಿಲ್ಲೆಯ ನಾಯಕರ ಬೆಂಬಲ ಯಾವ ಮಟ್ಟಿಗೆ ಸಿಗಲಿಗೆ ಎಂಬುದು ಯಕ್ಷ ಪ್ರಶ್ನೆಯಾಗಲಿದೆ.

    ಬೆಮೆಲ್ ಮಾತು ಕೇಳಿದ್ರಾ ವಾಸು?: ಶಾಸಕ ಶ್ರೀನಿವಾಸ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರೂ ಭವಿಷ್ಯದ ರಾಜಕೀಯ ಅಷ್ಟು ಸುಲಭವಾಗಿರುವುದಿಲ್ಲ ಎಂಬ ಮಾತು ಕ್ಷೇತ್ರದಲ್ಲಿದೆ. ಗುಬ್ಬಿಯಲ್ಲಿ ಕಾಂಗ್ರೆಸ್​ಗೆ ಹೇಳಿಕೊಳ್ಳುವ ನೆಲೆ ಇಲ್ಲವಾದ್ದರಿಂದ ಶ್ರೀನಿವಾಸ್​ಗೆ ಬದಲಾಗಿ ಕಾಂಗ್ರೆಸ್​ಗಷ್ಟೇ ಲಾಭವಾಗಲಿದೆ ಎನ್ನಲಾಗಿದೆ.

    ಸ್ಥಳೀಯರಲ್ಲದಿದ್ದರೂ ತುರುವೇಕೆರೆ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ವಿಧಾನ ಪರಿಷತ್ ಸದಸ್ಯ ಬಿಎಂಎಲ್ ಕಾಂತರಾಜು ನೆಪ ಮಾಡಿಕೊಂಡು ಪಕ್ಷಾಂತರ ಮಾಡುತ್ತಿರುವ ನಡುವೆಯೇ ತಮ್ಮ ಜತೆಗೆ ಶ್ರೀನಿವಾಸ್ ಕರೆದೊಯ್ಯಲು ಮಾಡಿದ್ದ ಮಾಸ್ಟರ್​ಪ್ಲಾನ್ ಫಲ ನೀಡಿದ್ದು ವಾಸು ಹಾಗೂ ಜೆಡಿಎಸ್ ಮುಖಂಡರ ನಡುವೆ ಅಂತರ ಹೆಚ್ಚಾಗಲು ಕಾರಣವಾಗಿದೆ ಎಂದು ಜೆಡಿಎಸ್ ಸ್ಥಳೀಯ ಮುಖಂಡರೇ ಮಾತನಾಡಿಕೊಳ್ಳುತ್ತಿದ್ದಾರೆ.

    ಸ್ವಾಭಿಮಾನ ಇರುವವರು ಜೆಡಿಎಸ್​ನಲ್ಲಿ ಉಳಿಯಲು ಸಾಧ್ಯವಿಲ್ಲ, ಉದ್ದೇಶಪೂರ್ವಕವಾಗಿಯೇ ನನ್ನನ್ನು ಹಾಗೂ ಬಿಎಂಎಲ್ ಕಾಂತರಾಜು ಅವರನ್ನು ಕುಮಾರಸ್ವಾಮಿ ದೂರವಿಟ್ಟಿದ್ದಾರೆ. ಮುಂಬರುವ ಚುನಾವಣೆಯಲ್ಲಿ ನಾವು ಯಾರೆಂದು ತಿಳಿಸುತ್ತೇವೆ. ಕ್ಷೇತ್ರದ ಜನರ ಅಭಿಪ್ರಾಯ ಪಡೆದು ಭವಿಷ್ಯದ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತೇನೆ.
    | ಎಸ್.ಆರ್.ಶ್ರೀನಿವಾಸ್ ಶಾಸಕ

    ಶಾಸಕ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಸೇರುವುದು ವದಂತಿಯಷ್ಟೆ. ಅವರಿನ್ನೂ ಜೆಡಿಎಸ್​ನಲ್ಲಿದ್ದಾರೆ. ಗುಬ್ಬಿಯಲ್ಲಿ ಕಾಂಗ್ರೆಸ್​ಗೆ ಅವರ ಅವಶ್ಯಕತೆಯೂ ಇಲ್ಲ, ಸುಮ್ಮನೆ ವದಂತಿ ಹಬ್ಬಿಸಿ ಗೊಂದಲ ಮೂಡಿಸಬಾರದು.
    | ಹೊನ್ನಗಿರಿಗೌಡ ಕಾಂಗ್ರೆಸ್ ಮುಖಂಡ

    ಸರ್ಕಾರಿ ಆಸ್ಪತ್ರೆಯಲ್ಲಿ ಮೇಣದಬತ್ತಿ ಬತ್ತಿ ಹಚ್ಚಿಕೊಂಡು ಹೆರಿಗೆ ಮಾಡಿದ ದಾದಿಯರು!

    ಅದ್ದೂರಿ ಮೆರವಣಿಗೆಯಲ್ಲಿ ಮಕ್ಕಳನ್ನು ಶಾಲೆಗೆ ಕರೆತಂದ ಶಿಕ್ಷಕರು! ಮನಸೆಳೆದ ದೀಪಾಲಂಕಾರ, ಡೊಳ್ಳುಕುಣಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts