ಸರ್ಕಾರಿ ಆಸ್ಪತ್ರೆಯಲ್ಲಿ ಮೇಣದಬತ್ತಿ ಬತ್ತಿ ಹಚ್ಚಿಕೊಂಡು ಹೆರಿಗೆ ಮಾಡಿದ ದಾದಿಯರು!

Candlelight Childbirth
Published on

ಕೊರಟಗೆರೆ: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತೋವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೇಣದ ಬತ್ತಿ ಹಚ್ಚಿಕೊಂಡು ಹೆರಿಗೆ ಮಾಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಬಂಡೆಹಳ್ಳಿ ಗೊಲ್ಲರಹಟ್ಟಿಯ ನಾಗರಾಜ್​ ಪತ್ನಿ ಮಂಗಳಮ್ಮ ಹೆರಿಗೆಗೆ ದಾಖಲಾಗಿದ್ದರು. ಹೆರಿಗೆ ವಾರ್ಡ್​ ಶಿಥಿಲಗೊಂಡಿದ್ದು, ಮಳೆ ನೀರು ಸೋರುವ ಆತಂಕದಲ್ಲಿ ವಾರ್ಡ್​ನ ವಿದ್ಯುತ್​ ಸಂಪರ್ಕ ಕಡಿತ ಮಾಡಲಾಗಿತ್ತು. ರಾತ್ರಿ ಪಾಳಿಯಲ್ಲಿ ವೈದ್ಯರು ಇಲ್ಲದೇ ಇರುವುದರಿಂದ ಕೊನೆಗೆ ದಾದಿಯರೇ ಮೇಣದ ಬತ್ತಿ ಹಚ್ಚಿಕೊಂಡು ಹೆರಿಗೆ ಮಾಡಲು ಮುಂದಾದಾಗ ಹಲವರು ಮೊಬೈಲ್​ ಟಾರ್ಚ್​ ಬೆಳಕು ಹಾಕಿದ್ದು, ಹೆರಿಗೆ ಸುಸೂತ್ರವಾಗಿ ನಡೆದಿದೆ.

ಇಲಾಖೆ ನಿಗದಿ ಮಾಡಿರುವುದಕ್ಕಿಂತಲೂ ಹೆಚ್ಚಿನ ಹೆರಿಗೆಗಳು ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಆಸ್ಪತ್ರೆಗೆ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಬೇಕಿದೆ. ಸಮಸ್ಯೆ ಬಗ್ಗೆ ಶಾಸಕರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಿಯರ ಒತ್ತಾಯಿಸಿದ್ದಾರೆ.

ಮಳೆಯಿರುವ ಹಿನ್ನೆಲೆಯಲ್ಲಿ ವಿದ್ಯುತ್​ ಡಿಪ್​ ಆಗಿದೆ, ಜನರೇಟರ್​ ದುರಸ್ಥಿಯಲ್ಲಿರಬಹುದು. ತನಿಖೆ ನಡೆಸುತ್ತೇನೆ, ಆಸ್ಪತ್ರೆ ಉನ್ನತೀಕರಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರವೇ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತೇವೆ.

|ಡಾ.ನಾಗೇಂದ್ರಪ್ಪ ಜಿಲ್ಲಾ ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net