More

    100 ಬೆಡ್ ಆಸ್ಪತ್ರೆಯನ್ನು ಶೃಂಗೇರಿಯಲ್ಲೇ ನಿರ್ಮಿಸಿ

    ಶೃಂಗೇರಿ: ನೂರು ಬೆಡ್ ಆಸ್ಪತ್ರೆಯು ಪಟ್ಟಣದಲ್ಲಿ ನಿರ್ಮಾಣಗೊಂಡರೆ ಉತ್ತಮ. ಗಾಮಸ್ಥರಿಗೂ ಬರಲೂ ಅನುಕೂಲ. ಅದೇ ನೆಮ್ಮಾರಿನಲ್ಲಿ ಆಸ್ಪತ್ರೆ ನಿರ್ಮಾಣಗೊಂಡರೆ ಬೇಗಾರು, ಕುಂಚೇಬೈಲು, ಮೆಣಸೆ, ಅಡ್ಡಗದ್ದೆ ಮುಂತಾದ ಗ್ರಾಪಂ ವ್ಯಾಪ್ತಿಯ ನಿವಾಸಿಗಳಿಗೆ ಬಂದು ಹೋಗಲು ತ್ರಾಸದಾಯಕವಾಗುತ್ತದೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎ.ಎಸ್.ನಯನ ತಿಳಿಸಿದರು.

    ಸೋಮವಾರ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಾಸಕ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
    ಇದಕ್ಕೆ ಪ್ರತಿಕ್ರಿಯಿಸಿದ ನಾಮ ನಿರ್ದೇಶಕ ಸದಸ್ಯ ಪುಟ್ಟಪ್ಪ ಹೆಗಡೆ, ಎಲ್ಲಿಯೂ ಜಾಗ ಸಿಗದೇ ಇದ್ದಲ್ಲಿ ನೆಮ್ಮಾರಿನಲ್ಲಿ ಮಾಡಿದ್ದರೆ ಉತ್ತಮ. ಹೆಚ್ಚುವರಿ ಚಿಕಿತ್ಸೆ ಬೇಕಾದ್ದಲ್ಲಿ ಮಂಗಳೂರು, ಮಣಿಪಾಲಕ್ಕೆ ಹೋಗಲು ಸುಲಭವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
    ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಪಟ್ಟಣದಲ್ಲಿ ಜಾಗದ ಕೊರತೆಯಿದೆ. ಶ್ರೀ ಮಠದ ಜಾಗದಲ್ಲಿರುವ ಹಳೇ ಆಸ್ಪತ್ರೆಗೆ ತಾಪಂ ಕಚೇರಿಯನ್ನು ವರ್ಗಾಯಿಸಿ, ತಾಪಂ ಕಚೇರಿಯನ್ನೇ ಕೊಂಚ ಮಾರ್ಪಡಿಸಿ ಆಸ್ಪತ್ರೆ ಮಾಡಬಹುದು. ಇದರಿಂದ ಜನಸಾಮಾನ್ಯರಿಗೂ ಅನುಕೂಲವಾಗುತ್ತದೆ. ಈ ಕುರಿತು ಅತಿ ಶೀಘ್ರದಲ್ಲಿ ಗಮನ ನೀಡಲಾಗುವುದು ಎಂದರು.
    ಸರ್ಕಾರಿ ಅಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ. ದಯಾನಂದ್ ಮಾತನಾಡಿ, ತಾಲೂಕಿನಲ್ಲಿ ಮಂಗನ ಕಾಯಿಲೆ ಕುರಿತು ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
    ವಿದ್ಯುತ್ ಕಣ್ಣಾಮುಚ್ಚಾಲೆ:
    ತಾಲೂಕಿನಲ್ಲಿ ನಿರಂತರವಾಗಿ ವಿದ್ಯುತ್ ಆಡಚಣೆ ಆಗುತ್ತಿದೆ. ಲೋ-ವೋಲ್ಟೇಜ್ ಹೆಚ್ಚಾಗಿದ್ದು, ಹೆಚ್ಚುವರಿ ವಿದ್ಯುತ್ ಸ್ಥಾವರ ಮಾಡುವ ಅಗತ್ಯವಿದೆ ಎಂದು ನಾಮ ನಿರ್ದೇಶಕ ಸದಸ್ಯ ಮೇಗಳಬೈಲು ಚಂದ್ರಶೇಖರ್ ಆಗ್ರಹಿಸಿದರು.
    ಇಲಾಖೆಯ ಎಇಇ ದೀಪಕ್ ಪ್ರತಿಕ್ರಿಯಿಸಿ, ವಿದ್ಯುತ್ ನಿರಂತರ ಹರಿವಿಗೆ ತಾಂತ್ರಿಕ ತೊಂದರೆ ಇದೆ. ಹೆಚ್ಚುವರಿ ಟಿ.ಸಿ. ಅಳವಡಿಸಲು ಅರಣ್ಯ ಇಲಾಖೆ ನಮ್ಮ ಜತೆ ಕೈಜೋಡಿಸಬೇಕಿದೆ ಎಂದರು.
    ಇದಕ್ಕೆ ದನಿಗೂಡಿಸಿದ ಎ.ಎಸ್.ನಯನ, ಶೃಂಗೇರಿ ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು, ವರ್ಷಕ್ಕೆ 80 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಬರುತ್ತಾರೆ. ಕತ್ತಲಿನಲ್ಲಿ ಅವರು ಕಾಲ ಕಳೆಯುವ ಸಂದರ್ಭ ಉಂಟಾಗುತ್ತಿದೆ. ಶಾಸಕರು ಈ ಸಂಬಂಧ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
    ತಾಪಂ ಇಒ ಸುದೀಪ್, ಸಬ್‌ಇನ್ಸ್‌ಪೆಕ್ಟರ್ ಜಕ್ಕಣನವರ್, ತಹಸೀಲ್ದಾರ್ ಗೌರಮ್ಮ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಸಿ.ಶಂಕರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts