More

    ರೋಗಿಯಂತೆ ಮಾರುವೇಷದಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದ IAS ಅಧಿಕಾರಿ: ನಂತರ ನಡೆದಿದ್ದು ಮಾತ್ರ ರೋಚಕ

    ಲಖನೌ: ಐಎಎಸ್​, ಐಪಿಎಸ್​ ಅಧಿಕಾರಿಗಳು ಸಾಮಾನ್ಯರಂತೆ ವೇಷ ಧರಿಸಿ ಸರ್ಕಾರಿ ಸಂಸ್ಥೆಗಳಲ್ಲಿನ ಅವ್ಯವಸ್ಥೆಯನ್ನು ಬಯಲು ಮಾಡುವಂತಹ ಸನ್ನಿವೇಶಗಳನ್ನು ಸಿನಿಮಾಗಳಲ್ಲಿ ನಾವು ಹೆಚ್ಚಾಗಿ ನೋಡಿರುತ್ತೇವೆ. ನಿಜ ಜೀವನದಲ್ಲಿ ಇಂತಹ ಸನ್ನಿವೇಶಗಳು ತುಂಬಾ ವಿರಳ ಅಂತಾನೇ ಹೇಳಬಹುದು. ಆದರೆ, ತಾಜಾ ಘಟನೆಯೊಂದರಲ್ಲಿ ಮಹಿಳಾ ಐಎಎಸ್​ ಅಧಿಕಾರಿಯೊಬ್ಬರು ರೋಗಿಯಂತೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿನ ಅವ್ಯವಸ್ಥೆಯನ್ನು ಬಯಲು ಮಾಡಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಾಮಾನ್ಯವಾಗಿ ಕೆಲವು ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಸರ್ಕಾರಿ ಆಸ್ಪತ್ರೆಗಳೆಂದರೆ ಸಾಕು ಮೂಗು ಮುರಿಯುವವರು ಹೆಚ್ಚಾಗಿದ್ದಾರೆ. ಅದಕ್ಕೆ ಕಾರಣ ಅಲ್ಲಿ ದುಡ್ಡು ಬಿಚ್ಚದೇ ಯಾವ ಕೆಲಸವೂ ನಡೆಯದು ಎಂಬ ಆರೋಪ. ಅಲ್ಲದೆ, ಟಾಯ್ಲೆಟ್​, ಬೆಡ್​ ಮತ್ತು ವಾರ್ಡ್​ ಸೇರಿದಂತೆ ಯಾವುದೂ ಸ್ವಚ್ಛವಾಗಿರುವುದಿಲ್ಲ ಹಾಗೂ ರೋಗಿಗಳೊಂದಿಗೆ ಸಿಬ್ಬಂದಿಯ ವರ್ತನೆ, ವೈದ್ಯರ ನಿರ್ಲಕ್ಷ್ಯ ಸೇರಿದಂತೆ ಸಾಕಷ್ಟು ಕಾರಣಗಳಿಂದ ಕೆಲ ಸರ್ಕಾರಿ ಆಸ್ಪತ್ರೆ ಮೇಲೆ ಜನರಿಗೆ ಭರವಸೆ ಇಲ್ಲ. ಸರ್ಕಾರಿ ಆಸ್ಪತ್ರೆಗೆ ಹೋಗಬೇಕಾದರೆ, ಜೀವದ ಮೇಲಿನ ಆಸೆಯನ್ನೇ ಬಿಡಬೇಕೆನ್ನುವ ಭಯ ಜನರಲ್ಲಿದೆ. ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ದೂರು ನೀಡಿದರು ಮೇಲಧಿಕಾರಿಗಳು ತಲೆಕೆಡಿಸಿಕೊಳ್ಳುವುದಿಲ್ಲ.

    ಆದರೆ, ಕೆಲ ಅಧಿಕಾರಿಗಳು ಮಾತ್ರ ಈ ವಿಚಾರದಲ್ಲಿ ತುಂಬಾ ವಿಭಿನ್ನವಾಗಿ ನಿಲ್ಲುತ್ತಾರೆ. ಜನರ ಕಷ್ಟಗಳನ್ನು ನೋಡಿ ಬೆಳೆದ ಅಧಿಕಾರಿಗಳು, ತಮ್ಮ ಆಡಳಿತಾವಧಿಯಲ್ಲಿ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಾರೆ. ಅದೇ ರೀತಿ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಮುಖವನ್ನು ಮುಚ್ಚಿಕೊಂಡು ರೋಗಿಯಂತೆ ಆಸ್ಪತ್ರೆಗೆ ಹೋಗಿ, ದಿಢೀರ್​ ತಪಾಸಣೆ ಮಾಡಿ ಅಲ್ಲಿದ್ದ ಸಿಬ್ಬಂದಿಗೆ ಶಾಕ್ ನೀಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಫಿರೋಜಾಬಾದ್‌ನಲ್ಲಿರುವ ದಿದಾ ಮಾಯಿ ಆರೋಗ್ಯ ಕೇಂದ್ರದಲ್ಲಿ ರೋಗಿಗಳು ಎದುರಿಸುತ್ತಿರುವ ತೊಂದರೆಗಳು ಮತ್ತು ಅನಾನುಕೂಲಗಳ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಹಲವು ದೂರುಗಳು ಬಂದಿದ್ದವು. ಬೆಳಗ್ಗೆ ಹತ್ತು ಗಂಟೆಯಾದರೂ ವೈದ್ಯರು ಸಿಗುತ್ತಿಲ್ಲ ಎಂದು ಹಲವರು ದೂರಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಫಿರೋಜಾಬಾದ್ ಸಬ್​ ಡಿವಿಜಿನಲ್​​ ಮ್ಯಾಜಿಸ್ಟ್ರೇಟ್ (ಎಸ್​ಡಿಎಂ) ಕೃತಿ ರಾಜ್, ಆಸ್ಪತ್ರೆಗೆ ದಿಢೀರ್ ಭೇಟಿ ತಪಾಸಣೆ ನಡೆಸಲು ನಿರ್ಧರಿಸಿದರು. ಈ ಕ್ರಮದಲ್ಲಿ ಕೃತಿ ರಾಜ್ ಅವರು ರೋಗಿಗಳಂತೆ ಮಾಸ್ಕ್ ಧರಿಸಿ, ವೈದ್ಯರ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದರು. ಆದರೆ, ವೈದ್ಯರ ವರ್ತನೆ ಸರಿಯಿಲ್ಲ ಎಂಬುದು ಅಧಿಕಾರಿ ಕೃತಿಗೆ ಅರಿವಾಗಿದೆ. ಇದಲ್ಲದೆ, ಆಸ್ಪತ್ರೆಯ ಮೆಡಿಕಲ್ ಸ್ಟಾಕ್ ಸ್ಟೋರ್‌ನಲ್ಲಿ ಹಲವು ಔಷಧಿಗಳು ಅವಧಿ ಮೀರಿರುವುದು ಕಂಡುಬಂದಿದೆ. ಹಾಜರಾತಿ ದಾಖಲಾತಿಯನ್ನು ಪರಿಶೀಲಿಸಿದಾಗ ರಿಜಿಸ್ಟರ್‌ನಲ್ಲಿ ಕೆಲವು ಸಹಿಗಳಿದ್ದು, ಅವರು ಆಸ್ಪತ್ರೆಯಲ್ಲಿ ಇಲ್ಲದಿರುವುದು ಬಯಲಾಗಿದೆ. ಅಲ್ಲದೆ, ಕರ್ತವ್ಯದಲ್ಲಿದ್ದ ಸಿಬ್ಬಂದಿಯು ಸಹ ಸರಿಯಾಗಿ ಸೇವೆ ಸಲ್ಲಿಸುತ್ತಿಲ್ಲ ಎಂಬುದನ್ನು ತಿಳಿದು ಎಲ್ಲರನ್ನು ಕೃತಿ ರಾಜ್​ ತೀವ್ರ ತರಾಟೆಗೆ ತೆಗೆದುಕೊಂಡರು.

    ತಪಾಸಣೆ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದ ಐಎಎಸ್ ಅಧಿಕಾರಿ ಕೃತಿ, ನಾಯಿ ಕಡಿತಕ್ಕೆ ಚುಚ್ಚುಮದ್ದು ನೀಡಲು 10 ಗಂಟೆ ಕಳೆದರೂ ವೈದ್ಯರು ಲಭ್ಯರಿಲ್ಲ ಎಂದು ದೂರು ಬಂದಿತ್ತು. ಹಾಗಾಗಿ ಮಾರುವೇಷದಲ್ಲಿ ಆಸ್ಪತ್ರೆಗೆ ಹೋಗಿದ್ದೆ. ವೈದ್ಯರ ಬಳಿ ಹೋದಾಗ ಅವರ ನಡವಳಿಕೆ ಚೆನ್ನಾಗಿರಲಿಲ್ಲ. ಜತೆಗೆ ದಾಸ್ತಾನಿನಲ್ಲಿರುವ ಬಹುತೇಕ ಔಷಧಗಳ ಅವಧಿ ಮುಗಿದಿದ್ದು, ಸ್ವಚ್ಛತೆಯನ್ನೂ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದರು. ಹಾಗಾಗಿ ಸರ್ಕಾರಿ ಆಸ್ಪತ್ರೆಯ ಸ್ಥಿತಿಗತಿ ಕುರಿತು ಶೀಘ್ರವೇ ವರದಿ ಕಳುಹಿಸುವುದಾಗಿ ತಿಳಿಸಿದರು.

    ಸದ್ಯ ಐಎಎಸ್ ಅಧಿಕಾರಿಯೊಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸಾಮಾನ್ಯ ರೋಗಿಯಂತೆ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)

    ಇಡ್ಲಿಗೆ ಹೆಚ್ಚುವರಿ ಸಾಂಬಾರ್​ ಕೊಡದಿದ್ದಕ್ಕೆ ಹೋಟೆಲ್​ ಸೂಪರ್​ವೈಸರ್​ನನ್ನೇ ಕೊಂದ ಅಪ್ಪ-ಮಗ!

    ತುಕಾಲಿ ಸಂತೋಷ್​ ಕಾರು ಅಪಘಾತ ಪ್ರಕರಣ: ಚಿಕಿತ್ಸೆ ಫಲಿಸದೇ ಆಟೋ ಚಾಲಕ ಸಾವು

    ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್​ ಸಿಕ್ಕ ಬೆನ್ನಲ್ಲೇ ಭಾವುಕ ಮಾತುಗಳನ್ನಾಡಿದ ರಾಜ ವಂಶಸ್ಥ ಯದುವೀರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts