ಸ್ವಾತಂತ್ರ್ಯೋತ್ಸವ ವೇಳೆ ಫ್ಲೆಕ್ಸ್​ನಲ್ಲಿ ಗೋಡ್ಸೆ ಫೋಟೋ ಹಾಕಿ ಸಂಭ್ರಮಾಚರಣೆ: ಮಧುಗಿರಿಯಲ್ಲಿ ವಿವಾದ

New Project
Published on

ತುಮಕೂರು: ಜಿಲ್ಲೆಯಲ್ಲಿ ಫ್ಲೆಕ್ಸ್ ಅವಾಂತರ ಮುಂದುವರಿದಿದ್ದು, ಮಧುಗಿರಿಯಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಶುಭಕೋರುವ ಫ್ಲೆಕ್ಸ್​ನಲ್ಲಿ ನಾಥೂರಾಮ್ ಗೂಡ್ಸೆ ಫೋಟೋ ಹಾಕಿರುವುದು ಈಗ ವಿವಾದ ಸೃಷ್ಠಿಸಿದೆ.

ಪಟ್ಟಣದ ದಂಡಿನ ಮಾರಮ್ಮ ದೇವಸ್ಥಾನ ಸಮೀಪ ಭಗತ್​ಸಿಂಗ್​ ಯೂಥ್​ ಅಸೋಸಿಯೇಷನ್​ ಹೆಸರಿನಿಂದ ಹಾಕಲಾಗಿದ್ದ ಫ್ಲೆಕ್ಸ್​​ನಲ್ಲಿ ಡಿಎಂ ಬಾಯ್ಸ್​ ಎಂದು ಬರೆದುಕೊಂಡಿದ್ದು, ಗಾಂಧೀಜಿ ಫೋಟೋಗಿಂತ ಮೇಲ್ಭಾಗದಲ್ಲಿ ಗೋಡ್ಸೆ ಫೋಟೋ ಹಾಕಿ ಸಂಭ್ರಮಿಸಿದ್ದಾರೆ. ಮಹಾತ್ಮಗಾಂಧಿ ಅವರನ್ನು ಕೊಂದಿರುವ ಗೂಡ್ಸೆ ಫೋಟೋವನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಜತೆ ಹಾಕಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಫ್ಲೆಕ್ಸ್​ನ ಮೇಲ್ಭಾಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಭಗತ್​ಸಿಂಗ್​, ಸುಭಾಷ್​ ಚಂದ್ರಬೋಸ್​, ಜತೆಗೆ ಗೋಡ್ಸೆ ಫೋಟೋ ಹಾಕಿದ ಕಿಡಿಗೇಡಿಗಳು, ಕೆಳಭಾಗದಲ್ಲಿ ಸರ್ದಾರ್​ ವಲ್ಲಭಾಯ್​ ಪಟೇಲ್​, ಚಂದ್ರಶೇಖರ್​ ಆಜಾದ್​, ಮಹಾತ್ಮಗಾಂಧೀಜಿ, ಲಾಲ್​ ಬಹುದ್ದೂರ್​ ಶಾಸ್ತ್ರಿಯವರ ಫೋಟೋ ಹಾಕಿ ಸಂಭ್ರಮಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್​ ಆಗುತ್ತಿದ್ದಂತೆ ರಾತ್ರೋರಾತ್ರಿ ಕಿಡಿಗೇಡಿಗಳು ಫ್ಲೆಕ್ಸ್ ತೆರವುಗೊಳಿಸಿದ್ದಾರೆ.

ಇದೊಂದು ವಿಕೃತ ಮನಸ್ಥಿತಿಯುಳ್ಳವರು ಮಾಡಿರುವ ಕೆಲಸ. ಈ ಬಗ್ಗೆ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ರಾತ್ರೋರಾತ್ರಿ ಫ್ಲೆಕ್ಸ್​ ತೆರವುಗೊಳಿಸಿರುವುದು ಕಂಡು ಬಂದಿದೆ. ಫ್ಲೆಕ್ಸ್​ ಅಳವಡಿಸಿದವರು ಯಾರು ಎಂಬುದು ಪತ್ತೆಯಾಗಿಲ್ಲ.

| ಸುರೇಶಾಚಾರ್ ತಹಸೀಲ್ದಾರ್​, ಮಧುಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net