ತುಮಕೂರಲ್ಲಿ ಸಿಎಂಗೆ ಪ್ರತಿಭಟನೆ ಬಿಸಿ ಮುಟ್ಟಿಸಲು ಸಜ್ಜಾದ ಜೆಡಿಎಸ್

bommai
Published on

ತುಮಕೂರು: ಇಂದು ಮಧ್ಯಾಹ್ನ ತುಮಕೂರಿಗೆ ಆಗಮಿಸಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಿಭಟನೆ ಬಿಸಿ ಮುಟ್ಟಿಸಲು ಜೆಡಿಎಸ್ ಸಜ್ಜಾಗಿದೆ.

ಕ್ಯಾತ್ಸಂದ್ರ ಸಮೀಪದ ಹಿರೇಹಳ್ಳಿಯಲ್ಲಿ ದನ ಮೇಯಿಸುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ದುಷ್ಕರ್ಮಿಗಳು ತಲೆಮರೆಸಿಕೊಂಡಿದ್ದಾರೆ. ಘಟನೆ ನಡೆದು (ಆ.24) ಒಂದು ತಿಂಗಳಾದರೂ ಆರೋಪಿಗಳನ್ನ ಪೊಲೀಸರು ಪತ್ತೆ ಮಾಡಿಲ್ಲ. 5 ಸಿಪಿಐ, 5 ಪಿಎಸ್​ಐ, 20ಕ್ಕೂ ಹೆಚ್ಚು ಪಿಎಸ್​ಐ ಅವರನ್ನೊಳಗೊಂಡ 70ಕ್ಕೂ‌ ಹೆಚ್ಚು ಪೊಲೀಸರ ತಂಡ ತನಿಖೆ ನಡೆಸುತ್ತಿದೆಯಾದರೂ ಆರೋಪಿಗಳ ಸಣ್ಣ ಸುಳಿವೂ ಸಿಕ್ಕಿಲ್ಲ. ಈ ಪ್ರಕರಣ ಸಂಬಂಧ ಈವರೆಗೂ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಜೆಡಿಎಸ್​ ಸಜ್ಜಾಗಿದೆ.

ಶನಿವಾರ ಮಧ್ಯಾಹ್ನ ಸಿಎಂ ಬೊಮ್ಮಾಯಿ ಅವರು ತುಮಕೂರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಕಪ್ಪುಪಟ್ಟಿ ಧರಿಸಿ ಸಿಎಂಗೆ ಘೇರಾವ್ ಹಾಕಲು ಚಿಂತನೆ ನಡೆಸಲಾಗಿದೆ. ಪ್ರತಿಭಟನೆ ನಡೆಸದಂತೆ ಜೆಡಿಎಸ್ ಕಚೇರಿ ಎದುರು ಪೊಲೀಸ್ ಬಂದೋಬಸ್ತ್​ ನಿಯೋಜನೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net