

ತುಮಕೂರು: ಇಲ್ಲಿನ ಛೋಟಸಾಬರ ಪಾಳ್ಯದಲ್ಲಿ ನಡೆದಿದ್ದ ರೈತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳ ಬಗ್ಗೆ ಇದುವರೆಗೂ ಸಣ್ಣ ಸುಳಿವೂ ಪತ್ತೆಯಾಗಿಲ್ಲ. ಮೈಸೂರಿನಲ್ಲಿ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸಿ ಮೆಚ್ಚುಗೆ ಪಡೆದಿರುವ ಪೊಲೀಸರು, ತುಮಕೂರು ಪ್ರಕರಣದಲ್ಲಿ ನಿರೀಕ್ಷಿತ ಯಶಸ್ಸು ಪಡೆದಿಲ್ಲ. ರೈತ ಮಹಿಳೆ ಎಂಬ ಕಾರಣಕ್ಕೆ ಪೊಲೀಸರು ಉದಾಸೀನ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಮೌನವಾಗಿರುವುದು ಅಚ್ಚರಿ ಮೂಡಿಸಿದೆ.
ಹಿರೇಹಳ್ಳಿ ಸಮೀಪದ ಛೋಟಸಾಬರ ಪಾಳ್ಯದ 35 ವರ್ಷದ ಮಹಿಳೆ ಮೃತದುರ್ದೈವಿ. ಆ.26ರಂದು ದನ ಮೇಯಿಸಲು ಹೋಗಿದ್ದ ಮಹಿಳೆಯನ್ನು ಈಕೆಯ ಮಗಳು ಹುಡುಕಿಕೊಂಡು ಹೊಲಕ್ಕೆ ಹೋಗಿದ್ದಾಗ ಟವಲ್ ಮಾತ್ರ ಸಿಕ್ಕಿತ್ತು, ಅಪ್ಪನಿಗೆ ವಿಷಯ ಮುಟ್ಟಿಸಿ ಕರೆದುಕೊಂಡು ಹೋಗಿ ನೋಡಿದಾಗ ಹೊಂಗೆ ಮರದ ಕೆಳಗೆ ಮಹಿಳೆಯ ಟವಲ್ ಬಿದ್ದಿತ್ತು. ಆ ಟವಲ್ ಜಾಡು ಹಿಡಿದು ಹೊರಟಾಗ ಹಸಿರು ಬಳೆ ಕಂಡಿತ್ತು. ಆ ಕ್ಷಣದಿಂದಲೇ ಪತ್ನಿ ಮೃತಪಟ್ಟಿದ್ದಾರೆ ಎಂಬುದನ್ನು ಖಾತ್ರಿ ಪಡಿಸಿಕೊಂಡು ಗೋಳಾಡಲಾರಂಭಿಸಿದ್ದರು. ಎಲ್ಲರೂ ನೋಡಿದಾಗ ವಿವಸ್ತ್ರ ಸ್ಥಿತಿಯಲ್ಲಿ ಶವವಿತ್ತು, ದೇಹವನ್ನು ಉಗುರಿನಿಂದ ಪರಚಿದ್ದರು, ಚರ್ಮ ಕಿತ್ತು ಹೋಗಿತ್ತು ಎಂದು ಪತ್ನಿಯನ್ನು ನೆನೆದು ಮೃತಳ ಪತಿ ‘ವಿಜಯವಾಣಿ’ ಮುಂದೆ ಕಣ್ಣೀರಿಟ್ಟ ದೃಶ್ಯ ಮನಕಲಕುವಂತಿತ್ತು.
ಆರೋಪಿಗಳ ಪತ್ತೆಯಲ್ಲಿ ಕನಿಷ್ಠ ಯಶಸ್ಸು ಗಳಿಸದಿದ್ದರೂ ಪೊಲೀಸರು ಗ್ರಾಮದಲ್ಲಿ ದೊಡ್ಡಮಟ್ಟದ ಸದ್ದು ಮಾತ್ರ ಮಾಡುತ್ತಿದ್ದಾರೆ, ಶುಕ್ರವಾರ 100ಕ್ಕೂ ಹೆಚ್ಚು ಪೊಲೀಸರು ಬೆಟ್ಟದಲ್ಲಿ ಸುತ್ತಾಡಿ ಕುರುಹು ಸಿಗಬಹುದೆಂದು ಹುಡುಕಾಡಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ತಡಕಾಡಿದರೂ ಸಣ್ಣ ಸುಳಿವೂ ಸಿಕ್ಕಿಲ್ಲ. ಎರಡು ತಿಂಗಳ ಹಿಂದೆ ಲಾಕ್ಡೌನ್ ಸಂದರ್ಭದಲ್ಲಿ ಮದ್ಯ ಸೇವನೆಗೆ ಬಂದು ಗ್ರಾಮಸ್ಥರಿಂದ ಬೈಸಿಕೊಂಡು ವಾಪಸಾಗಿದ್ದ ಗಡ್ಡಧಾರಿಯ ಚಹರೆ ಹಿಡಿದು ತನಿಖೆ ಕೈಗೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಬಂದು ಹೋಗಿರುವ ಅಪರಿಚಿತರ ಮಾಹಿತಿ ಅಪೂರ್ಣವಾಗಿದೆ.
ಮಹಿಳೆಯ ಸಾವಿನ ನಂತರ ಆಕೆಯ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಊರಿನಲ್ಲಿ ಮಹಿಳೆಯರು, ಮಕ್ಕಳು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರಲ್ಲಿ ಧೈರ್ಯ ತುಂಬುವ ಕೆಲಸವನ್ನು ಪೊಲೀಸರು ಮಾಡುತ್ತಿಲ್ಲ ಎಂಬ ಕೊರಗು ಗ್ರಾಮದಲ್ಲಿದೆ. ಆರೋಪಿಗಳು ಪತ್ತೆಯಾದರಷ್ಟೇ ಸ್ಥಳೀಯರಲ್ಲಿ ಧೈರ್ಯ ಬರಲಿದ್ದು ಪೊಲೀಸರು ಈ ನಿಟ್ಟಿನಲ್ಲಿ ಶ್ರಮಿಸಬೇಕಿದೆ.
ಪತ್ನಿ ಕಳೆದುಕೊಂಡು ನಾನು, ಮಕ್ಕಳು ಅನಾಥರಾಗಿದ್ದೇವೆ. ಯಾವ ರಾಕ್ಷಸ ಕೊಂದನೊ ಎಂಬ ಶಂಕೆಗೆ ಉತ್ತರ ಸಿಕ್ಕಿಲ್ಲ, ಪೊಲೀಸರು ಮಾತ್ರ ದಿನನಿತ್ಯ ಬಂದು ಹೋಗುತ್ತಿದ್ದಾರೆ. ಮೈಸೂರಿನಲ್ಲಿ ಆರೋಪಿಗಳ ಬಂಧನ ಸುದ್ದಿ ಕೇಳಿ ನಮ್ಮಲ್ಲೂ ಪತ್ತೆಹಚ್ಚುತ್ತಾರೆ ಎಂಬ ನಮ್ಮ ನಂಬಿಕೆ ಹುಸಿಯಾಗುತ್ತಿದೆ. ಶೀಘ್ರ ಆರೋಪಿಗಳ ಬಂಧನವಾಗಲಿ.
| ಮೃತ ಮಹಿಳೆಯ ಪತಿ
ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿದ್ದು, ಎಲ್ಲ ಆಯಾಮಗಳಲ್ಲಿಯೂ ತನಿಖೆ ಪ್ರಗತಿಯಲ್ಲಿದೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು. ಗ್ರಾಮಸ್ಥರಲ್ಲಿ ಧೈರ್ಯ ತುಂಬಲಾಗಿದೆ, ರಕ್ಷಣೆ ನೀಡಲಾಗುತ್ತದೆ.
| ರಾಹುಲ್ಕುಮಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ