ಗಣೇಶ ಹಬ್ಬಕ್ಕೆ ನಿರ್ಬಂಧ ಇಲ್ಲ, ವೈಭವದ ಗಣೇಶೋತ್ಸವಕ್ಕೆ ಅಸ್ತು ಎಂದ ಸರ್ಕಾರ

Ganesha
Published on

ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರ ಮಾತ್ರವಲ್ಲದೆ ರಾಜ್ಯದ ಎಲ್ಲ ಜಿಲ್ಲೆ, ಗಲ್ಲಿಗಳ ಸಾರ್ವಜನಿಕ ಗಜಾನನೋತ್ಸವ ಸಮಿತಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಕರೊನಾ ಸಾಂಕ್ರಾಮಿಕ ಪಿಡುಗಿನ ಕಾರಣಕ್ಕೆ ಎರಡು ವರ್ಷಗಳಿಂದ ವಿಧಿಸಿದ್ದ ನಿರ್ಬಂಧವನ್ನು ಈ ಬಾರಿ ತೆರವುಗೊಳಿಸಿದ್ದು, ಕರೊನಾ ಪೂರ್ವದಲ್ಲಿದ್ದ ಹಾಗೆ ವೈಭವದಿಂದ ಗಣೇಶೋತ್ಸವ ಆಚರಿಸಲು ಅಸ್ತು ಎಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆಗೆ ಚರ್ಚಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಹಿಂದಿನ ವರ್ಷಗಳಂತೆಯೇ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅವಕಾಶವಿದೆ. ಆದರೆ ಪರಿಸರ ಸ್ನೇಹಿ ಮಣ್ಣಿನಿಂದ ತಯಾರಿಸಿದ ಗಣಪತಿ ವಿಗ್ರಹಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಯಾವುದೇ ಕಾರಣಕ್ಕೂ ಪರಿಸರ ಮಾಲಿನ್ಯಗೊಳಿಸುವ ಪ್ಲಾಸ್ಲರ್ ಆಫ್​ ಪ್ಯಾರಿಸ್ ಇನ್ನಿತರ ವಸ್ತು ಬಳಸಿ ತಯಾರಿಸಿದ ಗಣೇಶ ವಿಗ್ರಹ ಕೂಡಿಸುವಂತಿಲ್ಲ ಎಂದರು.

ಸಾಂಕ್ರಾಮಿಕ ರೋಗ ನಿಯಂತ್ರಿಸುವುದಕ್ಕಾಗಿ ಎರಡು ವರ್ಷ ನಿರ್ಬಂಧ ವಿಧಿಸಲಾಗಿತ್ತು. ಈ ಕ್ರಮದಿಂದ ಹಿಂದುಪರ ಸಂಘಟನೆಗಳು ಮತ್ತು ಸಮಿತಿಗಳಿಗೆ ನೋವಾಗಿದ್ದು, ಅದಕ್ಕಾಗಿ ಕ್ಷಮೆ ಕೇಳುತ್ತೇವೆ ಎಂದರು.

ಬೆಂಗಳೂರಿನಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆಗೆ ಕೆರೆ, ಹೊಂಡಗಳ ವ್ಯವಸ್ಥೆ, ಸಾಗುವ ಮಾರ್ಗ ಇತ್ಯಾದಿ ವ್ಯವಸ್ಥೆಗಳ ಬಗ್ಗೆ ಬಿಬಿಎಂಪಿ ಮುಖೇನ ಶೀಘ್ರ ಮಾಹಿತಿ ನೀಡಲಾಗುತ್ತದೆ ಎಂದು ಆರ್.ಅಶೋಕ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net