

ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ, ಹಿರಿಯ ಪತ್ರಕರ್ತ ಗುರುಲಿಂಗ ಸ್ವಾಮಿ ಹೊಳಿಮಠ ಅವರು ಹೃದಯಾಘಾತದಿಂದ ಸೋಮವಾರ ನಿಧನಾರದರು.
ಸೋಮವಾರ ಬೆಳಗ್ಗೆ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಂದರ್ಭದಲ್ಲಿ ಗುರುಲಿಂಗ ಸ್ವಾಮಿ ಹೊಳಿಮಠ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ನಾಗರಭಾವಿಯ ಯುನಿಟಿ ಲೈಫ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗಮಧ್ಯೆಯೇ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾದಾಗಿಂದ ಮಾಧ್ಯಮ ವರ್ಗ ನೋಡಿಕೊಳ್ಳುತ್ತಿದ್ದ ಗುರುಲಿಂಗ ಸ್ವಾಮಿ, ನಂತರ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾಗಿದ್ದರು. ಇದಕ್ಕೂ ಮುನ್ನ ಕನ್ನಡದ ಹಲವು ಪತ್ರಿಕೆ- ಟಿವಿಗಳಲ್ಲೂ ಕೆಲಸ ನಿರ್ವಹಿಸಿದ್ದರು. ಈ ಟಿವಿ, ವಿಜಯವಾಣಿ ದಿನಪತ್ರಿಕೆ, ಟಿವಿ-5 ನಲ್ಲೂ ಕಾರ್ಯನಿರ್ವಹಿಸಿದ್ದರು.
ಸ್ನೇಹಮಯಿ ವ್ಯಕ್ತಿತ್ವವುಳ್ಳ ಗುರುಲಿಂಗಸ್ವಾಮಿ ಹೊಳಿಮಠ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ಮಾಧ್ಯಮ ಮಿತ್ರರು ಕಂಬನಿ ಮಿಡಿದಿದ್ದಾರೆ.