ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿ ವಿಧಿವಶ: ಮಕ್ಕಳಿಗೆ ಸಾಂತ್ವನ ಹೇಳಿ, ಯುವ ಸ್ನೇಹಿತನ ನೆನೆದು ಕಣ್ಣೀರಿಟ್ಟ ಸಿಎಂ

gurulingaswamy
Published on

ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ, ಹಿರಿಯ ಪತ್ರಕರ್ತ ಗುರುಲಿಂಗ ಸ್ವಾಮಿ ಹೊಳಿಮಠ ಅವರು ಹೃದಯಾಘಾತದಿಂದ ಸೋಮವಾರ ಬೆಳಗ್ಗೆ ನಿಧನರಾದರು. ಇವರ ಅಗಲಿಕೆ ಸುದ್ದಿ ಕೇಳಿ ಕಂಬನಿ ಮಿಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ನಾಗರಬಾವಿಯಲ್ಲಿ ಗುರುಲಿಂಗ ಸ್ವಾಮಿ ಹೊಳಿಮಠ ಅವರಿಗೆ ಅಂತಿಮ ನಮನ ಸಲ್ಲಿಸಿ, ಮೃತರ ಪತ್ನಿ ಮತ್ತು ಮಕ್ಕಳಿಗೆ ಸಾಂತ್ವನ ಹೇಳಿದರು.

ಗುರುಲಿಂಗಸ್ವಾಮಿ ನನ್ನ ಯುವ ಸ್ನೇಹಿತ. ಇವರ ಅಕಾಲಿಕ ಮರಣ ದುಃಖ ತಂದಿದೆ. ನನಗೆ 20 ವರ್ಷದಿಂದ ಇವನ ಪರಿಚಯ. ರಾಮದುರ್ಗದ ಹಳ್ಳಿಯವರು. ಕಷ್ಟಪಟ್ಟು ಓದಿ ಪಾಸ್ ಆಗಿ ಮಾಧ್ಯಮದಲ್ಲಿ ಕೆಲಸ ಪಡೆದುಕೊಂಡ. ಪತ್ರಿಕಾ ದಿನದ ಆರಂಭದಿನದಿಂದ ನನಗೆ ಪರಿಚಯ. ಟಿವಿ ಮಾಧ್ಯಮದಲ್ಲೂ ಕೆಲಸ ಮಾಡಿದ್ದರು. ಅತ್ಯಂತ ಕ್ರಿಯಾಶೀಲ ಪತ್ರಕರ್ತ. ವರದಿಯ ನಿಖರತೆ ಪಡೆದುಕೊಂಡು ಮುಂದುವರಿಯುವ ಜವಾಬ್ದಾರಿಯುತ ಪತ್ರಕರ್ತ. ಅವನೊಬ್ಬನೇ ಬೆಳೆಯಲಿಲ್ಲ, ತನ್ನ ಜೊತೆ ಇತರರನ್ನೂ ಬೆಳೆಸಿದ್ದ. ಸಹಾಯ ಕೇಳಿ ಬಂದವರಿಗೆ ಇಲ್ಲ ಎನ್ನುತ್ತಿರಲಿಲ್ಲ. ನಾನು ಗೃಹ ಸಚಿವರಾಗಿದ್ದಾಗಿನಿಂದ ನನ್ನ ಜೊತೆ ಇದ್ದ. ಪ್ರತಿ ದಿನ ಹಲವರಿಗೆ ಸಹಾಯ ಮಾಡುತ್ತಿದ್ದ. ಸಿಎಂ ಫಂಡ್ ಫೈಲಿಗೆ ಸಹಿ ಹಾಕಿಸಿ ಸಹಾಯ ಮಾಡ್ತಿದ್ದ. ನಿನ್ನೆ 8 ಗಂಟೆಗೆ ಮನೆಗೆ ಹೋಗ್ತೀನಿ ಅಂದ. ಬೆಳಗ್ಗೆ ಎದ್ದ ಬಳಿಕ ಇಂತಹ ಸುದ್ದಿ ಬರುತ್ತೆ ಅಂತ ಅನಿಸಿರಲಿಲ್ಲ. ನಾಗರಾಜ್ ಜಮಖಂಡಿ ಜೊತೆ ಜತೆಯಲ್ಲೇ ಇವನು ಹೋದ. ಪ್ರತೀ ವರ್ಷ ಜಮಖಂಡಿ ಅವರ ಕಾರ್ಯಕ್ರಮ ಇವನೇ ನಿಂತು ಮಾಡುತ್ತಿದ್ದ ಎನ್ನುತ್ತಲೇ ಭಾವುಕರಾದ ಸಿಎಂ ಬಸವರಾಜ ಬೊಮ್ಮಾಯಿ, ಇವನ ಕ್ರಿಯಾಶೀಲತೆ ಇತರರಿಗೂ ಮಾದರಿಯಾಗಲಿ. ಅವನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಂಬನಿ ಮಿಡಿದರು.

'ಆತ್ಮೀಯ ಕಿರಿಯ ಮಿತ್ರ, ಕಳೆದ ಹಲವಾರು ವರ್ಷಗಳಿಂದ ನನ್ನ ಜೊತೆ ಒಡನಾಟ ಹೊಂದಿ, ನನ್ನ ಮಾಧ್ಯಮ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಗುರುಲಿಂಗಸ್ವಾಮಿ ಹೊಳಿಮಠ ಅವರು ಇಂದು ಅಕಾಲಿಕ ನಿಧನರಾದ ವಿಷಯ ತಿಳಿದು ತೀವ್ರ ಆಘಾತ ಹಾಗೂ ದುಃಖಿತನಾಗಿದ್ದೇನೆ. ಒಬ್ಬ ದಕ್ಷ ಹಾಗೂ ಕ್ರಿಯಾಶೀಲ ಪತ್ರಕರ್ತರಾಗಿದ್ದ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಹಲವು ಸಾಧನೆಗೈದು ಇನ್ನೂ ಹೆಚ್ಚಿನದನ್ನು ಸಾಧಿಸಲು ಹಂಬಲ ಹೊಂದಿದ್ದರು. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಿ ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ‌. ಓಂ ಶಾಂತಿಃ' ಎಂದು ಟ್ವೀಟ್​ ಮೂಲಕವೂ ಸಿಎಂ ಸಂತಾಪ ಸೂಚಿಸಿದ್ದಾರೆ.

ಗುರುಲಿಂಗಸ್ವಾಮಿ ಹೊಳಿಮಠ ಅವರ ಅಂತಿಮ ದರ್ಶನ ಪಡೆಯಲು ಸಿಎಂ ಜತೆ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ತೋಟಗಾರಿಕಾ ಸಚಿವ ಮುನಿರತ್ನ ಇತರರು ಆಗಮಿಸಿದ್ದರು. ಮಾಧ್ಯಮ ಕ್ಷೇತ್ರದ ಹಿರಿಯರು, ಕಿರಿಯ ಸಹೋದ್ಯೋಗಿಗಳೂ ಗುರುಲಿಂಗಸ್ವಾಮಿ ಹೊಳಿಮಠ ಅವರ ನಿಧನದ ಸುದ್ದಿ ಕೇಳಿ ಕಂಬನಿ ಮಿಡಿದಿದ್ದಾರೆ. ಗುರುಲಿಂಗಸ್ವಾಮಿ ಅವರ ಅಂತ್ಯಕ್ರಿಯೆ ನಾಳೆ(ಮಂಗಳವಾರ) ಬೆಳಗ್ಗೆ 10 ಗಂಟೆಗೆ ಬೆಳಗಾವಿ ಜಿಲ್ಲೆಯ ರಾಮದರ್ಗ ಪಟ್ಟಣದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net