

ಬಾಗಲಕೋಟೆ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ವೈದ್ಯ ಡಾ.ಅಶೋಕ ಸೊನ್ನದ(83) ಅವರು ಕರೊನಾಗೆ ಬಲಿಯಾಗಿದ್ದಾರೆ.
ಮೂಲತಃ ಮುಧೋಳ ತಾಲೂಕಿನ ಬಂಟನೂರು ಗ್ರಾಮದ ಡಾ.ಅಶೋಕ ಸೊನ್ನದ ಅವರು ಅಮೆರಿಕದಲ್ಲಿ 40 ವರ್ಷ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ತದನಂತರ ಬಾಗಲಕೋಟೆ ನಗರದಲ್ಲಿಯೇ ಇದ್ದರು. ಇಲ್ಲಿನ ಜನರಿಗೆ ಉಚಿತ ಚಿಕಿತ್ಸೆ ನೀಡುತ್ತ ಸಮಾಜ ಸೇವೆ ಸಲ್ಲಿಸುತ್ತಿದ್ದರು. ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ ನಡೆಸಿದ್ದರು. ಇವರ ಸೇವೆಗೆ 2020ರಲ್ಲಿ ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದಿತ್ತು.
ಇತ್ತೀಚಿಗೆ ಡಾ. ಅಶೋಕ ಅವರಿಗೆ ಕರೊನಾ ಸೋಂಕು ತಗುಲಿತ್ತು. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಡಾ. ಅಶೋಕ್ ಸೊನ್ನದ ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಕುಟುಂಬ ಅಮೆರಿಕದಲ್ಲಿ ನೆಲೆಸಿದೆ. ಇವರ ಮನೆಯಲ್ಲಿ 7 ಮಂದಿ ಪಿಎಚ್.ಡಿ ಪದವೀಧರರಿದ್ದು, ಡಾಕ್ಟರೇಟ್ ಕುಟುಂಬ ಎಂದು ಗಿನ್ನಿಸ್ ಅವಾರ್ಡ್ ಈ ಕುಟುಂಬಕ್ಕೆ ಸಿಕ್ಕಿದೆ.