

ಬೆಂಗಳೂರು: ಇತ್ತೀಚಿಗೆ ತೆರೆಕಂಡ 'ಸಲಗ' ಸಿನಿಮಾದ ಹಾಡಿನೊಂದಿಗೆ ಅದ್ದೂರಿಯಾಗಿ ಏರಿಯಾಕ್ಕೆ ಎಂಟ್ರಿ ಕೊಟ್ಟ ನಟೋರಿಯಸ್ ರೌಡಿ ಜೆಸಿ ಆನಂದ್, ಮರುದಿನ ಅದೇ ಜಾಗದಲ್ಲಿ ಬೀದಿ ಹೆಣವಾದ ಸ್ಟೋರಿ ಇದು. ಸಾವಿಗೂ ಮುನ್ನಾ ದಿನ ಆ ಏರಿಯಾದಲ್ಲಿ ಅವನ ಹವಾ ಹೇಗಿತ್ತು? ಅಂತ ಕೇಳಿದ್ರೆ ಶಾಕ್ ಆಗ್ತೀರಿ.
18 ವರ್ಷಕ್ಕೆ ಕೊಲೆ ಮಾಡಿ ಜೈಲಿಗೆ ಹೊಗಿದ್ದ ಜೆಸಿ ಆನಂದ, 2016ರಲ್ಲಿ ಸುಪಾರಿ ಪಡೆದು ಕೊಲೆ ಕೇಸ್ನಲ್ಲಿ ಮತ್ತೆ ಜೈಲು ಸೇರಿದ್ದ. ನಂತರ ಕಳೆದ ಮಾರ್ಚ್ನಲ್ಲಿ ಕಿಡ್ನ್ಯಾಪ್ ಕೇಸ್ನಲ್ಲಿ ಜೈಲು ಸೇರಿದ್ದವ ಎರಡೇ ತಿಂಗಳಲ್ಲಿ ಹೊರ ಬಂದಿದ್ದ. ಈ ನಡುವೆ ಚನ್ನರಾಯಪಟ್ಟಣದ ಊರಿಗೆ ಹೋಗಿದ್ದ ಆನಂದ ಅಲ್ಲೇ ನೆಲೆಸಿದ್ದ. ಕೋರ್ಟ್ಗೆ ಹೋಗಬೇಕಿದ್ದ ಹಿನ್ನೆಲೆಯಲ್ಲಿ ಅ.23ರಂದು ಬೆಂಗಳೂರಿಗೆ ಬಂದಿದ್ದ ಆನಂದ, ಅಂದು ರಾತ್ರಿ ಪೀಣ್ಯದ ಶಿಪುರ ಏರಿಯಾಕ್ಕೆ ಎಂಟ್ರಿ ಕೊಟ್ಟಿದ್ದ. ಈತನ ಎಂಟ್ರಿಗೆ ಇಡೀ ಏರಿಯಾಕ್ಕೆ ಬಿರಿಯಾನಿ ಮಾಡಿಸಿದ್ದ ಬೆಂಬಲಿಗರು, ಪಟಾಕಿ ಸಿಡಿಸಿ, ಬೈಕ್ ರ್ಯಾಲಿ ನಡೆಸಿ, 'ಸಲಗ' ಮೂವಿಯ ಹಾಡು ಹಾಕಿ ಅದ್ದೂರಿ ಸ್ವಾಗತ ಕೋರಿದ್ದರು. ಅಂದು ಆ ಏರಿಯಾದ ಕೆಲ ಮಹಿಳೆಯರು ಜೆಸಿ ಆನಂದನಿಗೆ ಆರತಿ ಬೆಳಗಿ, ದೃಷ್ಟಿ ತೆಗೆದು ಸ್ವಾಗತ ಕೋರಿದ್ದರು. ಆರತಿ ಮಾಡಿಸಿಕೊಂಡಿದ್ದ ಜಾಗದಲ್ಲೇ ಮರುದಿನ ಬೀದಿ ಹೆಣವಾಗಿದ್ದ!
ಅ.23ರಂದು ಊರಿಂದ ಬೆಂಗಳೂರಿಗೆ ಬಂದಿದ್ದ ಜೆಸಿ ಆನಂದನ ಬೆನ್ನ ಹಿಂದೆಯೇ ಸಾವು ಹಿಂಬಾಲಿಸಿಕೊಂಡು ಬಂದಿತ್ತು. ಇದರ ಪರಿವೇ ಇಲ್ಲದ ಆನಂದ, ಸಾವಿಗೂ ಮುನ್ನಾ ದಿನದ ರಾತ್ರಿ ಗೆಳೆಯರೊಂದಿಗೆ ಭರ್ಜರಿ ಪಾರ್ಟಿಯನ್ನೇ ಮಾಡಿದ್ದ. ತನ್ನ ಕಡೆಯ ಹುಡುಗರ ಜತೆ ಕುಣಿದು ಕುಪ್ಪಳಿಸುತ್ತಾ ಧೂಳೆಬ್ಬಿಸಿದ್ದ ಆನಂದ, ಮರುದಿನ ಧೂಳಾಗಿ ಹೋಗಿದ್ದ. ಹಳೇ ದ್ವೆಷದ ಹಿನ್ನೆಲೆ ದುಷ್ಕರ್ಮಿಗಳ ತಂಡ ಆನಂದನನ್ನು ಮುಖ ಗುರುತು ಸಿಗದಷ್ಟು ಭೀಕರವಾಗಿ ಕೊಚ್ಚಿ ಹಾಕಿದ್ದರು. ಹೊಟ್ಟೆಯಿಂದ ಕರುಳು ಹೊರ ಬಂದಿತ್ತು. ಇದನ್ನ ಕಂಡ ಆನಂದನ ಕಡೆಯ ಹುಡುಗರು ಶಾಕ್ ಆಗಿದ್ದರು.