ಮಂಗಳೂರಿನ ಭರತನಾಟ್ಯ ಕಲಾವಿದೆ ರೆಮೋನಾ ಪಿರೇರಾಗೆ ರಾಷ್ಟ್ರೀಯ ಬಾಲ ಪುರಸ್ಕಾರ: ವಿಡಿಯೋ ಕಾನ್ಫರೆನ್ಸ್​ನಲ್ಲೇ ಗೌರವಿಸಿದ ಪ್ರಧಾನಿ

bala purashkara
Published on

ಮಂಗಳೂರು: ನಗರದ ಪದುವ ಶಾಲೆ ವಿದ್ಯಾರ್ಥಿನಿ, ಭರತನಾಟ್ಯ ಕಲಾವಿದೆ ರೆಮೋನಾ ಪಿರೇರಾ ಅವರಿಗೆ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ 'ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ' ಪ್ರದಾನ ಮಾಡಿದರು.

ಮಂಗಳೂರಿನ ಜಿಪಂ ಸಭಾಂಗಣದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ತಾಯಿ ಹಾಗೂ ಸೋದರನೊಂದಿಗೆ ಪಾಲ್ಗೊಂಡಿದ್ದ ರೆಮೋನಾ, ಪ್ರಧಾನಿ ಜತೆ ಮಾತುಕತೆ ನಡೆಸಿದರು. 3 ವರ್ಷ ವಯಸ್ಸಿನಿಂದಲೇ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದೀರಿ, ಹೇಗೆ ಅಭ್ಯಾಸ ಮಾಡಿದ್ದೀರಿ? ನೀವೇ ಸ್ವಯಂ ಆಗಿ ಅಭ್ಯಾಸ ಮಾಡುತ್ತಿದ್ದೀರಾ ಅಥವಾ ಹೆತ್ತವರು ಕಾಳಜಿ ವಹಿಸಿದ್ದರೇ ಎಂದು ಪ್ರಧಾನಿ ಪ್ರಶ್ನಿಸಿದಾಗ 'ನನ್ನ ತಾಯಿ ಅವರಿಗೆ ಭಾರತೀಯ ಸಂಸ್ಕೃತಿ ಬಗ್ಗೆ ತುಂಬಾ ಆಸಕ್ತಿ. ಹಾಗಾಗಿ ಇದರಲ್ಲಿ ನಾನೂ ಆಸಕ್ತಿ ಬೆಳೆಸಿಕೊಂಡೆ' ಎಂದು ರೆಮೋನಾ ಉತ್ತರಿಸಿದರು.

ಚಿಕ್ಕಂದಿನಿಂದಲೇ ಏನಾದರೂ ಕಠಿಣ ಪರಿಸ್ಥಿತಿ ಎದುರಾಗಿತ್ತೇ ಎಂದು ಪ್ರಧಾನಿ ಅವರು ಕೇಳಿದಾಗ ಉತ್ತರಿಸಿದ ರೆಮೋನಾ, ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡೆ. ಹಾಗಾಗಿ ತಾಯಿ ಬಹಳ ಕಷ್ಟಪಟ್ಟರು, ಕಷ್ಟದಲ್ಲೇ ನನ್ನನ್ನು ಓದಿಸುತ್ತಿದ್ದಾರೆ. ನೃತ್ಯ ತರಬೇತಿಗೂ ಸೇರಿಸಿದರು... ಎನ್ನುತ್ತಿದ್ದಂತೆ ರೆಮೋನಾ ತಾಯಿಗೂ ಮೋದಿ ನಮಸ್ಕರಿಸಿದರು.

2022ನೇ ಸಾಲಿನ ರಾಷ್ಟ್ರೀಯ ಬಾಲ ಪುರಸ್ಕಾರ(ಕಲೆ ಮತ್ತು ಸಂಸ್ಕೃತಿ ವಿಭಾಗ)ಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ರೆಮೋನಾ ಮಂಗಳೂರಿನ ಪದುವ ಪಿಯು ಕಾಲೇಜಿನ ವಿದ್ಯಾರ್ಥಿನಿ. 16 ರಾಜ್ಯಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ 20 ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮಂಗಳೂರಿನ ನೃತ್ಯಗುರು ಡಾ.ಶ್ರೀವಿದ್ಯಾ ಮುರಳೀಧರ್‌ ಅವರ ಶಿಷ್ಯೆ. ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯು 1 ಲಕ್ಷ ರೂ. ಬಹುಮಾನ ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net