

ರಾಮನಗರ: ಬದುಕು ಕಟ್ಟಿಕೊಳ್ಳಲೆಂದು ನೇಪಾಳದಿಂದ ಕರ್ನಾಟಕಕ್ಕೆ ಕುಟುಂಬವೊಂದು ಬಂದಿತ್ತು. ಕೂಲಿ ಕೆಲಸಕ್ಕೇನೂ ಕೊರತೆ ಇರಲಿಲ್ಲ. ರಾಮನಗರದಲ್ಲಿ ವ್ಯಕ್ತಿಯೊಬ್ಬರು ಕೊಟ್ಟ ಶೆಡ್ನಲ್ಲೇ ಮಕ್ಕಳೊಂದಿಗೆ ವಾಸ ಮಾಡುತ್ತಾ ಹೋಟೆಲ್ ಸೇರಿದಂತೆ ಇತರೆಡೆ ಕೂಲಿ ಕೆಲಸ ಮಾಡಿಕೊಂಡು ಬಂದ ಹಣದಲ್ಲೇ ನೆಮ್ಮದಿಯಿಂದ ದಿನ ದೂಡುತ್ತಿತ್ತು. ಆದರೆ, ವಿಧಿಯ ಆಟವೇ ಬೇರೆಯೇ ಆಗಿತ್ತು… ಮಳೆ ರೂಪದಲ್ಲಿ ಬಂದ ಜವರಾಯ ಇಬ್ಬರ ಪ್ರಾಣ ಹೊತ್ತೊಯ್ದಿದ್ದಾನೆ.
ಹಲವು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಪಕ್ಕದ ಮನೆಯ ಗೋಡೆಯೊಂದು ಇವರಿದ್ದ ಶೆಡ್ ಮೇಲೆ ಬಿದ್ದಿದ್ದು, ಮಕ್ಕಳಿಬ್ಬರು ದುರಂತ ಅಂತ್ಯ ಕಂಡಿದ್ದಾರೆ. ದಿನಗೂಲಿ ಮಾಡಿಕೊಂಡಿದ್ದವರ ಬದುಕಲ್ಲಿ ಖುಷಿ ತಂದಿದ್ದ ಮಕ್ಕಳು ಬಾರದ ಲೋಕಕ್ಕೆ ಹೋಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಂತಹ ಮನಕಲಕುವ ಘಟನೆ ಮಾಗಡಿ ತಾಲೂಕು ಸೋಲೂರು ಹೋಬಳಿಯ ಕೂಡ್ಲೂರು ಕ್ರಾಸ್ ಬಳಿ ಶನಿವಾರ ಮಧ್ಯರಾತ್ರಿ ಸಂಭವಿಸಿದೆ. ಫರ್ಬೀನ್(4) ಮತ್ತು ಇಷಿಕಾ(3) ಮೃತ ದುರ್ದೈವಿಗಳು.
ಮುಬೀನ್ ಷರೀಫ್ ಎಂಬುವರಿಗೆ ಸೇರಿದ ಶೆಡ್ ಮೇಲೆ ಪಕ್ಕದ ಗಂಗರಂಗಮ್ಮ ಎಂಬುವರಿಗೆ ಸೇರಿದ ಜಾನುವಾರು ಕೊಟ್ಟಿಗೆಯ ಗೋಡೆ ಕುಸಿದು ಬಿದ್ದಿದೆ. ಗಾಢ ನಿದ್ರೆಯಲ್ಲಿದ್ದ ಫರ್ಬೀನ್ ಮತ್ತು ಇಷಿಕಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಜತೆಯಲ್ಲೇ ಮಲಗಿದ್ದ ಮೀನಾ ಬಿತ್ತು (30) ಮತ್ತು ಮೋನಿಷಾ (35) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಲೂರಿನ ಕಾಮದೇನು ಹೋಟೆಲ್ನಲ್ಲಿ ಈ ಕುಟುಂಬದ ಸದಸ್ಯರು ಕೆಸಲ ಮಾಡುತ್ತಿದ್ದರು. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.