More

    ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತನ್ನ ಮಗುವನ್ನೇ ಕೊಂದ ವೈದ್ಯೆ ಪ್ರಕರಣ: ತಂದೆಯ ಹೇಳಿಕೆ ಕೇಳಿದ್ರೆ ಮನಸ್ಸು ಭಾರ…

    ಬೆಂಗಳೂರು: ಆಟವಾಡಿಸುವ ನೆಪದಲ್ಲಿ ತನ್ನ ಮಗುವನ್ನು 4ನೇ ಮಹಡಿಗೆ ಕರೆದೊಯ್ದ ವೈದ್ಯೆ, ಅಲ್ಲಿಂದ ಕೆಳಗೆ ಮಗು ಎಸೆದು ಸಾಯಿಸಿದ ಅಮಾನುಷ ಕೃತ್ಯ ಬೆಂಗಳೂರಲ್ಲಿ ನಡೆದಿದೆ. ಆ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪತ್ನಿಯ ಕೃತ್ಯ ನೋಡಿ ಕಣ್ಣೀರು ಸುರಿಸುತ್ತಿರುವ ಗಂಡ, ‘ಅವಳಿಗೆ ಕಷ್ಟ ಅಂತ ಹೇಳಿದ್ರೆ ನಾನೇ ನನ್ನ ಮಗುವನ್ನ ಸಾಕುತ್ತಿದ್ದೆ. ಪಾಪ ಏನೂ ಅರಿಯದ ಕಂದಮ್ಮನನ್ನ ಕೊಂದು ಬಿಟ್ಲು’ ಎಂದು ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯ ಮನಕಲಕುವಂತಿದೆ.

    ಏನಿದು ಪ್ರಕರಣ?: ಸಂಪಂಗಿರಾಮನಗರದ ಸಿಕೆಸಿ ಗಾರ್ಡನ್​ನ ಅದ್ವಿತ್​ ಅಪಾರ್ಟ್​ಮೆಂಟ್​ನ ನಿವಾಸಿ ದಂತ ವೈದ್ಯೆ ಸುಷ್ಮಾ ಮತ್ತು ಸಾಫ್ಟ್​ವೇರ್​ ಇಂಜಿನಿಯರ್​ ಕಿರಣ್​ ದಂಪತಿಗೆ 4 ವರ್ಷದ ಧ್ರುತಿ ಮಗಳು ಇದ್ದಳು. ಗುರುವಾರ(ಆ.4) ಮಧ್ಯಾಹ್ನ 3.30ರಲ್ಲಿ ಮನೆಯಲ್ಲಿ ಅತ್ತೆ ಇದ್ದರು. ಆಗ ಮಗಳನ್ನು ಆಟ ಆಡಿಸುವುದಾಗಿ ಹೇಳಿ 2ನೇ ಮಹಡಿಯಿಂದ 4ನೇ ಮಹಡಿಗೆ ಕರೆದೊಯ್ದ ಸುಷ್ಮಾ, ಕೆಳಗೆ ಎಸೆದಿದ್ದಾಳೆ. ಬಳಿಕ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಬಂದು ಸುಷ್ಮಾಳನ್ನು ರಕ್ಷಿಸಿದ್ದಾರೆ. ಗಾಯಗೊಂಡ ಮಗುವನ್ನು ನಿಮ್ಹಾನ್ಸ್​ ಆಸ್ಪತ್ರೆಗೆ ಕರೆದೊಯ್ದರಾದರೂ ಮಗು ಬದುಕಲಿಲ್ಲ.

    ಹುಬ್ಬಳ್ಳಿ ಮೂಲದ ಸುಷ್ಮಾ ಮತ್ತು ಕಿರಣ್​ 11 ವರ್ಷಗಳ ಹಿಂದೆ ವಿವಾಹವಾಗಿದ್ದು, ಬಳಿಕ ಒಂದು ವರ್ಷ ಲಂಡನ್​ನಲ್ಲಿ ದಂಪತಿ ನೆಲೆಸಿದ್ದರು. ವಾಪಸ್​ ಬೆಂಗಳೂರಿಗೆ ಬಂದು ಸಂಪಂಗಿರಾಮನಗರದ ಅದ್ವಿತ್​ ಅಪಾರ್ಟ್​ಮೆಂಟ್​ನ 2ನೇ ಮಹಡಿಯಲ್ಲಿ ನೆಲೆಸಿದ್ದರು.

    ಮದುವೆ ಆಗಿ ಆರು ವರ್ಷವಾದರೂ ಸಂತಾನ ಇಲ್ಲದೆ ನೊಂದಿದ್ದ ದಂಪತಿ, ಹಲವು ವೈದ್ಯರನ್ನು ಸಂಪರ್ಕಿಸಿತ್ತು. 4 ವರ್ಷಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಧ್ರುತಿ ಬೆಳವಣಿಗೆಯಲ್ಲಿ ಕುಂಠಿತವಾಗಿತ್ತು. ಆತಂಕಗೊಂಡ ಸುಷ್ಮಾ ಮತ್ತು ಕಿರಣ್​, ಮಗಳನ್ನು ವೈದ್ಯರ ಬಳಿಗೆ ಕರೆದೊಯ್ದು ತೋರಿಸಿದಾಗ ಬುದ್ಧಿಮಾಂದ್ಯವಾಗಿದೆ ಎಂದಿದ್ದರು. ಎರಡು ವರ್ಷಗಳಿಂದ ಹಲವು ತಜ್ಞರಿಂದ ಚಿಕಿತ್ಸೆ ಕೊಡಿಸಿದ್ದರು. ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ಇದರಿಂದ ಸುಷ್ಮಾ ಖಿನ್ನತೆಗೆ ಒಳಗಾಗಿದ್ದಳು.

    ಮಗಳ ಹತ್ಯೆಗೆ ನಿರ್ಧರಿಸಿದ್ದ ಸುಷ್ಮಾ, ಗುರುವಾರ ಮಧ್ಯಾಹ್ನ ಅತ್ತೆಗೆ (ಕಿರಣ್​ ತಾಯಿ) ಮಗಳನ್ನು ಹೊರಗೆ ಆಟವಾಡಿಸುವುದಾಗಿ ಹೇಳಿ 4ನೇ ಮಹಡಿಗೆ ಕರೆತಂದಿದ್ದಾಳೆ. ಕೆಲ ಸಮಯ ಆಟವಾಡಿಸಿ ಯಾರು ಇಲ್ಲದೆ ಇದ್ದಾಗ 4 ಅಡಿ ಎತ್ತರದ ಅಡ್ಡಗೋಡೆ ಮೇಲೆ ಕೂರಿಸಿ ತಕ್ಷಣವೇ ಎತ್ತಿಕೊಂಡಿದ್ದಾಳೆ. ಇದು ಕೊಲೆಗೂ ಮುನ್ನ ಒಮ್ಮೆ ಪರೀಕ್ಷೆ ನಡೆಸಿದ್ದಳು ಎನ್ನಲಾಗಿದೆ. ಇದಾದ ಮೇಲೆ ಮಗುವನ್ನು ಕೆಳಗೆ ಎಸೆದಿದ್ದಾಳೆ. ತನ್ನ ಮೇಲೆ ಅನುಮಾನ ಬಾರದಂತೆ ಮಗುವನ್ನು ಕಾಪಾಡಿ ಎಂದು ಚಿರಾಡಿದ್ದಾಳೆ. ಬಳಿಕ ತಾನೂ 4ನೇ ಮಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಅಷ್ಟರಲ್ಲಿ ಅಕ್ಕಪಕ್ಕದ ನಿವಾಸಿಗಳು ಬಂದು ಸುಷ್ಮಾಳನ್ನು ರಕ್ಷಣೆ ಮಾಡಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಮಗು ಮೃತಪಟ್ಟಿದೆ. ಪೊಲೀಸರ ಎದುರು ಕಣ್ಣೀರು ಹಾಕಿದ ಮಗು ತಂದೆ ಕಿರಣ್​, ಅವಳಿಗೆ ಕಷ್ಟ ಅಂತಾ ಹೇಳಿದ್ರೆ ನನ್ನ ಮಗುವನ್ನು ನಾನೇ ನೋಡಿಕೊಳ್ತಿದ್ದೆ ಸರ್​… ಅತ್ತಿದ್ದಾರೆ.

    ರೈಲಿನಲ್ಲಿ ಬಿಟ್ಟು ಬಂದಿದ್ದ ತಾಯಿ: ಮಗಳ ಆರೈಕೆ ಮಾಡಲು ಸಾಧ್ಯವಾಗದೆ ಖಿನ್ನತೆಗೆ ಒಳಗಾಗಿದ್ದ ಸುಷ್ಮಾ, ದೂರ ಮಾಡಿಕೊಳ್ಳಲು ನಿರ್ಧರಿಸಿದ್ದಳು. ತಿಂಗಳ ಹಿಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಹೋಗಿದ್ದ ಸುಷ್ಮಾ, ಒಡಿಶಾ ರೈಲಿನಲ್ಲಿ ಮಗುವನ್ನು ಬಿಟ್ಟು ಮನೆಗೆ ಬಂದಿದ್ದಳು. ನಂತರ ಎಸ್​.ಆರ್​.ನಗರ ಠಾಣೆಯಲ್ಲಿ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ಕೊಟ್ಟಿದ್ದಳು. ವಿಷಯ ತಿಳಿದ ಕಿರಣ್​, ಬಾಸ್ಕೋಂ ಸಂಸ್ಥೆ ಸಹಾಯದಿಂದ ಮಗಳನ್ನು ಹುಡುಕಿ ಕರೆತಂದಿದ್ದರು. ಇದಾದ ಮೇಲೆ ಮಗಳ ಬಗ್ಗೆ ಹೆಚ್ಚು ನಿಗಾವಹಿಸಿದ್ದರು. ನಿಮ್ಹಾನ್ಸ್​ ಆಸ್ಪತ್ರೆಯಲ್ಲಿ ಪ್ರತಿ ದಿನ ಚಿಕಿತ್ಸೆಗೆ ತಂದೆಯೇ ಕರೆದುಕೊಂಡು ಹೋಗುತ್ತಿದ್ದರು.

    ಸತ್ಯ ಬಿಚ್ಚಿಟ್ಟ ಸಿಸಿ ಕ್ಯಾಮರಾ: ಮಗಳು ಆಟವಾಡುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದಳೆಂದು ಸುಷ್ಮಾ ಹೇಳಿದ್ದಳು. ವೈದ್ಯರು ಕೊಟ್ಟ ಮಾಹಿತಿ ಮೇರೆಗೆ ಘಟನಾ ಸ್ಥಳದ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ತಾಯಿಯೇ ಮಗಳನ್ನು ಕೆಳಗೆ ಎಸೆಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೆ, ಇದಕ್ಕೂ ಮೊದಲು ತಡೆಗೋಡೆ ಮೇಲೆ ಮಗುವನ್ನು ಕೂರಿಸಿ ತಕ್ಷಣ ಎತ್ತಿಕೊಳ್ಳುವ ದೃಶ್ಯ ಲಭ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ಮಗುವನ್ನು ತಾಯಿಯೇ 4ನೇ ಮಹಡಿಯಿಂದ ಕೆಳಗೆ ಎಸೆದಿದ್ದಾಳೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಕೊಲೆ ಪ್ರಕರಣ ದಾಖಲಿಸಿ ತಾಯಿಯನ್ನು ಬಂಧಿಸಲಾಗಿದೆ.
    |ಶ್ರೀನಿವಾಸಗೌಡ ಡಿಸಿಪಿ, ಕೇಂದ್ರ ವಿಭಾಗ

    ನಾಗಮಂಗಲ ಶಾಸಕ ಸುರೇಶ್‌ಗೌಡ ವಿರುದ್ಧ ಎಫ್​ಐಆರ್​! ಸಾಕ್ಷ್ಯವಾಗಿ ವಿಡಿಯೋ-ಫೋಟೋ ಸಲ್ಲಿಕೆ

    ಜಮೀರ್​ಗೆ ಸಾಲ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಕೆಜಿಎಫ್​​ ಬಾಬು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts