More

    ಹೂಡಿಕೆದಾರರಿಗೆ 7.34 ಲಕ್ಷ ಕೋಟಿ ರೂ. ಸಂಪತ್ತು ನಷ್ಟ! ಮುಂದುವರಿದ ಷೇರು ಮಾರುಕಟ್ಟೆ ಕುಸಿತ

    ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ಗುರುವಾರ ಭಾರಿ ಕುಸಿತವಾಗಿದ್ದರಿಂದ ಹೂಡಿಕೆದಾರರ 7.34 ಲಕ್ಷ ಕೋಟಿ ರೂಪಾಯಿ ಕೊಚ್ಚಿ ಹೋಗಿದೆ. ಸತತ ಮೂರನೇ ದಿನವೂ ಷೇರು ಮೌಲ್ಯಗಳಲ್ಲಿ ಇಳಿಕೆ ದಾಖಲಾಯಿತು. ಬಿಎಸ್​ಇ ಸೆನ್ಸೆಕ್ಸ್ 1,062.22 ಪಾಯಿಂಟ್​ನಷ್ಟು (ಶೇಕಡ 1.45) ಭಾರಿ ಕುಸಿತ ಕಂಡು 72,404.17 ಪಾಯಿಂಟ್​ನಲ್ಲಿ ದಿನದ ವ್ಯವಹಾರವನ್ನು ಮುಗಿಸಿತು. ದೈನಿಕ ವ್ಯವಹಾರದ ನಡುವೆ ಅದು 1,132.21 ಪಾಯಿಂಟ್ ಕುಸಿತವಾಗಿ 72,334.18ಕ್ಕೆ ತಲುಪಿತ್ತು.

    ಷೇರು ಮೌಲ್ಯಗಳು ಕುಸಿದ ಕಾರಣ, ಬಿಎಸ್​ಇ-ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯ (ಎಂಕ್ಯಾಪ್) 7,34,513.48 ಕೋಟಿ ರೂಪಾಯಿ ನಷ್ಟವಾಗಿ 3,93,34,513.48 ಕೋಟಿ ರೂಪಾಯಿಗೆ (4.71 ಟ್ರಿಲಿಯನ್ ಡಾಲರ್) ಇಳಿಯಿತು. ಮೇ 2ರಂದು ಬಿಎಸ್​ಇ ನೋಂದಾಯಿತ ಕಂಪನಿಗಳ ಎಂಕ್ಯಾಪ್ ಸಾರ್ವಕಾಲಿಕ 4,08,49,767.90 ಕೋಟಿ ರೂ.ಗೆ ತಲುಪಿತ್ತು.

    ಎಲೆಕ್ಷನ್ ಫಲಿತಾಂಶದ ನಿರೀಕ್ಷೆಯ ಒತ್ತಡ

    ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಯ ಫಲಿತಾಂಶದ ನಿರೀಕ್ಷೆಯ ಹಿನ್ನೆಲೆಯಲ್ಲಿ ಮಾರುಕಟ್ಟೆ ಮೇಲೆ ತೀವ್ರವಾದ ಒತ್ತಡ ಉಂಟಾಗುತ್ತಿದೆ. ಸಾರ್ವತ್ರಿಕ ಚುನಾವಣೆಗಳ ವಿಚಾರದಲ್ಲಿ ಅನಿಶ್ಚಯತೆ ಉಂಟಾಗಿರುವುದು ಮಾರುಕಟ್ಟೆ ಮೌಲ್ಯ ಕುಸಿಯಲು ಪ್ರಮುಖ ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕ ಅರವಿಂದರ್ ಸಿಂಗ್ ನಂದಾ ಅಭಿಪ್ರಾಯ ಪಟ್ಟಿದ್ದಾರೆ.

    ರಫ್ತು ಪ್ರಮಾಣ ಹೆಚ್ಚಳ

    ನವದೆಹಲಿ: ಜಾಗತಿಕ ಮಟ್ಟದಲ್ಲಿ ಆರ್ಥಿಕ ಕ್ಷೇತ್ರ ತೀವ್ರ ಹಿನ್ನಡೆ ಅನುಭವಿಸುತ್ತಿದ್ದರೂ ಭಾರತದ ರಫ್ತು ಪ್ರಮಾಣ ಹೆಚ್ಚಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ. 115 ರಾಷ್ಟ್ರಗಳಿಗೆ ಮಾಡುತ್ತಿದ್ದ ರಫ್ತು ವಹಿವಾಟು 2023-24ರ ಆರ್ಥಿಕ ವರ್ಷದಲ್ಲಿ ಏರಿಕೆ ಕಂಡಿದೆ.

    ಭಾರತದ ಒಟ್ಟು ರಫ್ತಿನಲ್ಲಿ ಈ ರಾಷ್ಟ್ರಗಳಿಗೆ ಆಗುತ್ತಿರುವ ರಫ್ತಿನ ಪ್ರಮಾಣ ಶೇ. 46.5ರಷ್ಟಿದೆ. ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್, ನೆದರ್ಲೆಂಡ್, ಚೀನಾ, ಬ್ರಿಟನ್, ಸೌದಿ ಅರೇಬಿಯಾ, ಸಿಂಗಪೂರ್, ಬಾಂಗ್ಲಾದೇಶ, ಜರ್ಮನಿ ಮತ್ತು ಇಟಲಿ ಇದರಲ್ಲಿ ಪ್ರಮುಖ ರಾಷ್ಟ್ರಗಳಾಗಿವೆ. ಒಟ್ಟಾರೆ ರಫ್ತು 2022-23ರಲ್ಲಿ 776.4 ಶತಕೋಟಿ ಡಾಲರ್​ನಷ್ಟಿದ್ದದ್ದು 2023-34ರಲ್ಲಿ 778.2 ಶತಕೋಟಿ ಡಾಲರ್​ಗೆ ಏರಿ, 0.23ರಷ್ಟು ಬೆಳವಣಿಗೆ ದಾಖಲಿಸಿದೆ. ಸೇವಾ ವಲಯದಲ್ಲಿ 2022-23ರಲ್ಲಿ 325.3 ಶತಕೋಟಿ ಡಾಲರ್ ಇದ್ದ ರಫ್ತು 2023-24ರಲ್ಲಿ 341.1 ಶತಕೋಟಿ ಡಾಲರ್​ಗೆ ಏರಿದೆ. ಸರಕು ರಫ್ತು 2014ರಲ್ಲಿ ಶೇ. 1.70ರಷ್ಟಿದ್ದದ್ದು 2023ರಲ್ಲಿ ಶೇ. 1.82ಕ್ಕೆ ಏರಿದೆ. ಟಾಪ್ 10 ರಾಷ್ಟ್ರಗಳಿಗೆ ಮಾಡುತ್ತಿದ್ದ ರಫ್ತು ಕಳೆದ ವರ್ಷಕ್ಕಿಂತ ಶೇ. 13ರಷ್ಟು ಏರಿಕೆ ಕಂಡಿದೆ. ಯುಎಇಗೆ ಅತಿ ಹೆಚ್ಚು, ಅಂದರೆ ಶೇ. 12.71ರಷ್ಟು ರಫ್ತು ವಹಿವಾಟು ನಡೆದಿದೆ. ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ ವಸ್ತುಗಳು, ಔಷಧಗಳು, ಹತ್ತಿ ಬಟ್ಟೆ, ಕೈಮಗ್ಗ ವಸ್ತುಗಳು ಸೇರಿದಂತೆ ಒಟ್ಟು 17 ವಸ್ತುಗಳ ರಫ್ತಿನ ಪ್ರಮಾಣ 2023-24ರಲ್ಲಿ ಹೆಚ್ಚಳ ಕಂಡಿದೆ. ಒಟ್ಟು ರಫ್ತಿನಲ್ಲಿ ಇವುಗಳ ಪಾಲು ಶೇ. 48.4ರಷ್ಟಿದೆ.

    ತಾಳೆಎಣ್ಣೆ ಆಮದು ಮಾಡಿಕೊಂಡ್ರೆ ಒರಾಂಗುಟಾನ್ ಉಚಿತ!

    ಕೌಲಾಲಂಪುರ: ತಾಳೆ ಎಣ್ಣೆ ಆಮದು ಮಾಡಿಕೊಳ್ಳುವ ಪ್ರಮುಖ ದೇಶಗಳ ಜತೆಗಿನ ಸಂಬಂಧವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಮಲೇಷ್ಯಾ ‘ಒರಾಂಗುಟಾನ್ ರಾಜತಾಂತ್ರಿಕತೆ’ಯ ಮೊರೆ ಹೋಗಿದೆ. ಆಮದಿಗೆ ಪ್ರತಿಯಾಗಿ ಆ ರಾಷ್ಟ್ರಗಳಿಗೆ ಒರಾಂಗುಟಾನ್ ಪ್ರಾಣಿಗಳನ್ನು ಉಡುಗೊರೆಯಾಗಿ ನೀಡಲು ಮುಂದಾಗಿದೆ. ಚೀನಾ ಕೂಡ ಈ ಮೊದಲು ವ್ಯಾಪಾರಕ್ಕೆ ಪ್ರತಿಯಾಗಿ ವಿವಿಧ ದೇಶಗಳಿಗೆ ಪಂಡಾಗಳನ್ನು ನೀಡುತ್ತಿತ್ತು. ಅದು ‘ಪಂಡಾ ರಾಜತಾಂತ್ರಿಕತೆ’ ಎಂದೇ ಜನಜನಿತವಾಗಿದೆ. ಒರಾಂಗುಟಾನ್​ಗಳ ಸಂಖ್ಯೆ ತೀವ್ರವಾಗಿ ಇಳಿಯುತ್ತಿರುವುದರಿಂದ, ಅವುಗಳನ್ನು ಉಳಿಸಲು ಪರಿಣಾಮಕಾರಿ ಉಪಕ್ರಮಗಳನ್ನು ಕೈಗೊಳ್ಳುವಂತೆ ಪ್ರಾಣಿಪ್ರಿಯರು ಮಲೇಷ್ಯಾ ಸರ್ಕಾರವನ್ನು ಒತ್ತಾಯಿಸಿದ್ದರು. ಅರಣ್ಯನಾಶಕ್ಕೆ ಕಾರಣ ವಾಗುವ ವಸ್ತುಗಳ ಮೇಲೆ ಯೂರೋಪಿಯನ್ ಒಕ್ಕೂಟ ಆಮದು ನಿಷೇಧ ಹೇರಿದ ಬೆನ್ನಲ್ಲೇ ಮಲೇಷ್ಯಾ ಈ ಕ್ರಮಕ್ಕೆ ಮುಂದಾಗಿದೆ. ತಾಳೆ ಎಣ್ಣೆ ಆಮದಿನ ಮೇಲೇ ಕೂಡ ಈ ನಿಷೇಧ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಒರಾಂಗುಟಾನ್ ಉಡುಗೊರೆ ಪಡೆಯುವ ದೇಶಗಳಲ್ಲಿ ಯೂರೋಪಿಯನ್ ಒಕ್ಕೂಟದ ರಾಷ್ಟ್ರಗಳು, ಭಾರತ, ಚೀನಾ ಮುಂತಾದವು ಕೂಡ ಸೇರಿವೆ.

    ಬೈಜುಸ್ ಶುಲ್ಕ ಶೇ. 30-40 ಕಡಿತ

    ದೇಶದ ಪ್ರಮುಖ ಎಡ್​ಟೆಕ್ ಕಂಪನಿಗಳಲ್ಲೊಂದಾದ ಬೈಜುಸ್ ಕೋರ್ಸ್ ಸಬ್​ಸ್ಕ್ರಿಪ್ಷನ್ ಶುಲ್ಕವನ್ನು ಶೇ. 30ರಿಂದ 40ರಷ್ಟು ಇಳಿಸಿ, ಕೋರ್ಸ್​ಗಳ ಮಾರಾಟದ ಪ್ರೋತ್ಸಾಹಕ ಧನವನ್ನು (ಇನ್ಸೆಂಟಿವ್) ಶೇ. 50ರಿಂದ ನೂರರಷ್ಟು ಏರಿಸಿದೆ ಎಂದು ಮೂಲಗಳು ತಿಳಿಸಿವೆ. ಕಂಪನಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ ಬಳಿಕ ದೈನಂದಿನ ಕಾರ್ಯಾಚರಣೆಯ ಜವಾಬ್ದಾರಿಯನ್ನು ಸ್ವತಃ ವಹಿಸಿಕೊಂಡಿರುವ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೈಜು ರವೀಂದ್ರನ್, 1500 ಸೇಲ್ಸ್ ಅಸೋಸಿಯೇಟ್​ಗಳು ಮತ್ತು ಮ್ಯಾನೇಜರ್​ಗಳ ಜತೆ ಸಭೆ ನಡೆಸಿ, ಕಂಪನಿಯ ಕಾರ್ಯತಂತ್ರ ಬದಲಾವಣೆ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.

    ಸೇಲ್ಸ್ ಟೀಮ್ ಸದಸ್ಯರಿಗೆ ನೀಡಬೇಕಾಗಿರುವ ಬಾಕಿ ವೇತನವನ್ನು ಪ್ರೋತ್ಸಾಹಕಗಳ ಸಹಿತ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಸೋಸಿಯೇಟ್​ಗಳು ಗ್ರಾಹಕರ ಜತೆಗಿನ ಕರೆಗಳಲ್ಲಿ ಎಷ್ಟು ಗಂಟೆ ಮಾತನಾಡಿದ್ದಾರೆ ಎಂಬ ವಿವರಗಳನ್ನು ಇನ್ನು ಮುಂದೆ ಪರಿಗಣಿಸುವುದಿಲ್ಲ. ಮ್ಯಾನೇಜರ್​ಗಳು ಒತ್ತಡ ಹೇರಿದರೆ, ದುರ್ವರ್ತನೆ ತೋರಿದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ ಎಂದು ರವೀಂದ್ರನ್ ಕೆಳಮಟ್ಟದ ಸಿಬ್ಬಂದಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

    ಚಿನ್ನದ ಸಾಲಕ್ಕೆ 20 ಸಾವಿರಕ್ಕಿಂತ ಹೆಚ್ಚು ನಗದು ಹಣ ಕೊಡಬೇಡಿ

    ಚಿನ್ನದ ಮೇಲಿನ ಸಾಲ ನೀಡುವಾಗ 20 ಸಾವಿರ ರೂ.ಗಿಂತ ಹೆಚ್ಚು ಹಣವನ್ನು ನಗದು ರೂಪದಲ್ಲಿ ನೀಡಬಾರದು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ತಾಕೀತು ಮಾಡಿದೆ.

    ಆದಾಯ ತೆರಿಗೆ ಕಾಯ್ದೆ 1961ರ 269 ಎಸ್​ಎಸ್ ಸೆಕ್ಷನ್ ಪ್ರಕಾರ ಚಿನ್ನದ ಮೇಲಿನ ಸಾಲಕ್ಕೆ 20 ಸಾವಿರ ರೂ.ಗಿಂತ ಹೆಚ್ಚು ಹಣವನ್ನು ನಗದು ರೂಪದಲ್ಲಿ ನೀಡುವಂತಿಲ್ಲ ಎಂದು ಎಚ್ಚರಿಸಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನಗದು ವಿತರಿಸಿದ್ದಕ್ಕಾಗಿ ಕಳೆದ ಮಾರ್ಚ್​ನಲ್ಲಿ ಐಐಎಫ್​ಎಲ್ ಫೈನಾನ್ಸ್​ಗೆ ಆರ್​ಬಿಐ ನಿರ್ಬಂಧ ವಿಧಿಸಿತ್ತು.

    ಕೌಟುಂಬಿಕ ಉಳಿತಾಯ ತೀವ್ರ ಇಳಿಕೆ

    ಗೃಹ ಸಾಲ, ವಾಹನ ಸಾಲ, ಪರ್ಸನಲ್ ಲೋನ್ ಬಡ್ಡಿ ದರ ಹೆಚ್ಚಾಗಿರುವುದರಿಂದ ದೇಶದಲ್ಲಿ ನಿವ್ವಳ ಕೌಟುಂಬಿಕ ಉಳಿತಾಯ ಕಳೆದ ಮೂರು ವರ್ಷಗಳಲ್ಲಿ ಸುಮಾರು 9 ಲಕ್ಷ ಕೋಟಿ ರೂ.ಗಳಷ್ಟು ಇಳಿದಿದೆ. ಆದರೆ ಭದ್ರತೆರಹಿತ ವೈಯಕ್ತಿಕ ಸಾಲದ ಮೇಲೆ ರಿಸರ್ವ್ ಬ್ಯಾಂಕ್ ಹಲವು ನಿರ್ಬಂಧ ಹೇರಿರುವ ಪರಿಣಾಮ 2024-25ರಲ್ಲಿ ಈ ಟ್ರೆಂಡ್ ತಿರುವುಮುರುವಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.

    2020-21ರ ಆರ್ಥಿಕ ವರ್ಷದಲ್ಲಿ ನಿವ್ವಳ ಕೌಟುಂಬಿಕ ಉಳಿತಾಯ 23.29 ಲಕ್ಷ ಕೋಟಿ ರೂ. ಇತ್ತು. 2021-22ರಲ್ಲಿ ಅದು 17.12 ಲಕ್ಷ ಕೋಟಿ ರೂ.ಗೆ ಇಳಿದಿತ್ತು. 2022-23ರ ಆರ್ಥಿಕ ವರ್ಷದ ವೇಳೆಗೆ ಮತ್ತಷ್ಟು ಇಳಿಕೆಯಾಗಿ 14.16 ಲಕ್ಷ ಕೋಟಿ ರೂ.ಗೆ ತಲುಪಿದೆ. 2020-21ರಲ್ಲಿ 64,084 ಕೋಟಿ ರೂ. ಇದ್ದ ಭಾರತೀಯರ ಮ್ಯೂಚುಯಲ್ ಫಂಡ್ ಹೂಡಿಕೆ 2022-23ರ ವೇಳೆಗೆ 1.79 ಲಕ್ಷ ಕೋಟಿ ರೂ.ಗೆ ಏರಿದೆ. ಷೇರು, ಡಿಬೆಂಚರ್​ಗಳಲ್ಲಿನ ಕೌಟುಂಬಿಕ ಹೂಡಿಕೆ 1.07 ಲಕ್ಷ ಕೋಟಿ ರೂ.ಗಳಿಂದ 2.06 ಲಕ್ಷ ಕೋಟಿ ರೂ.ಗೆ ಏರಿದೆ. ಕುಟುಂಬಗಳಿಗೆ ವಿತರಿಸುವ ಬ್ಯಾಂಕ್ ಸಾಲಗಳು 6.05 ಲಕ್ಷ ಕೋಟಿ ರೂ.ಗಳಿಂದ 11.88 ಲಕ್ಷ ಕೋಟಿ ರೂ.ಗೆ ಏರಿದೆ. ಗೃಹ ಸಾಲ 4 ಪಟ್ಟು ಹೆಚ್ಚಿದ್ದು, 93,723 ಕೋಟಿ ರೂ.ಗಳಿಂದ 3.33 ಲಕ್ಷ ಕೋಟಿ ರೂ.ಗೆ ಏರಿದೆ.

    ನಯನತಾರ ಸೇರಿದಂತೆ ಟಾಪ್​​ ನಟಿಯರೊಂದಿಗೆ ಲವ್ವಿ-ಡವ್ವಿ​! ಈ ವದಂತಿಗಳಲ್ಲಿ ಸಿಲುಕಿದ್ದ ಸ್ಟಾರ್​ ನಟ ಈತ

    ಅಶ್ಲೀಲ ವಿಡಿಯೋ ವಿವಾದ: ನಟಿ ಜ್ಯೋತಿ ರೈ ಪರ ಫ್ಯಾನ್ಸ್​ ಮಾಡಿಕೊಂಡ ಮನವಿ ಇದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts