PSI ನೇಮಕಾತಿ ಅಕ್ರಮ: ಮತ್ತೆ 3 ದಿನ CID ಕಸ್ಟಡಿಗೆ ಅಮೃತ್​ ಪೌಲ್​, ನಾಲ್ವರಿಗೆ ನ್ಯಾಯಾಂಗ ಬಂಧನ

psi
Published on

ಬೆಂಗಳೂರು: 545 ಪಿಎಸ್​ಐ ಹುದ್ದೆಗಳ ನೇಮಕಾತಿ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿರುವ ಐಪಿಎಸ್​ ಅಧಿಕಾರಿ ಅಮೃತ್​ ಪೌಲ್​ ಅವರನ್ನ ಮತ್ತೆ 3 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಕೋರ್ಟ್​ ನೀಡಿದೆ.

ಜು.4ರಂದು ಅಮೃತ್​ ಪೌಲ್​ರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಹೆಚ್ಚಿನ ವಿಚಾರಣೆ ಸಲುವಾಗಿ 10 ದಿನಗಳ ಕಾಲ ಇವರನ್ನು ಸಿಐಡಿ ಕಸ್ಟಡಿಗೆ ಅಧಿಕಾರಿಗಳು ಪಡೆದಿತ್ತು. ಈ ಅವಧಿಗೆ ಇಂದಿಗೆ(ಜು.13) ಮುಗಿದ ಹಿನ್ನೆಲೆ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಅಮೃತ್​ಪೌಲ್ ಜತೆ ಇನ್ನುಳಿದ ನಾಲ್ವರು ಆರೋಪಿಗಳಾದ ಡಿವೈಎಸ್ಪಿ ಶಾಂಕಕುಮಾರ್, ಎಫ್​ಡಿಎ ಹರ್ಷ, ಆರ್​ಎಸ್​ಐ ಶ್ರೀಧರ್ ಹಾಗೂ ಶ್ರೀನಿವಾಸ್ ಎಂಬುವರನ್ನ ಹಾಜರುಪಡಿಸಿದ್ದರು.

ಇಂದು ಅಮೃತ್ ಪೌಲ್​ ಅವರು ಇಂದು ತಮ್ಮ ಐಫೋನ್​​ನ ಪಾಸ್​ವರ್ಡ್ ನೀಡಿದ್ದಾರೆ. ಇದನ್ನ ಈಗಾಗಲೇ ಫಾರ್ಮ್ಯಾಟ್ ಮಾಡಲಾಗಿದೆ. ಹೀಗಾಗಿ ಕ್ಲೌಡ್​ಗೆ ಹಾಕಿ ಡಾಟಾ ರಿಕವರಿ ಮಾಡಬೇಕು. ಅಲ್ಲದೆ ಅಮೃತ್ ಪೌಲ್​ಗೆ 1.36 ಕೋಟಿ ರೂಪಾಯಿ ನೀಡಿರುವುದಾಗಿ ಶಾಂತಕುಮಾರ್ ಬಾಯ್ಬಿಟ್ಟಿದ್ದಾರೆ. ಹೀಗಾಗಿ ಇನ್ನಷ್ಟು ವಿಚಾರಣೆ ನಡೆಸಬೇಕು. 6 ದಿನಗಳ ಕಾಲ ಅಮೃತ್​ ಪೌಲ್​ ಅವರನ್ನ ನಮ್ಮ ಕಸ್ಟಡಿಗೆ ನೀಡಬೇಕು ಎಂದು ಕೋರ್ಟ್​ಗೆ ಸಿಐಡಿ ಅಧಿಕಾರಿಗಳು ಮನವಿ ಸಲ್ಲಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಮೃತ್ ಪೌಲ್ ಪರ ವಕೀಲರು, ಅವರು ಎಲ್ಲೂ ಓಡಿ ಹೋಗಿಲ್ಲ. ಈಗ ಫೋನ್​ನಲ್ಲಿರುವ ಡಾಟಾ ತೆಗೆಯಲು ಅವರನ್ನ ಕಸ್ಟಡಿಗೆ ಪಡೆಯುವ ಅವಶ್ಯಕತೆ ಇಲ್ಲ ಎಂದರು. ಅವರನ್ನು ಕುಟುಂಬ ಸದಸ್ಯರು ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ತನಿಖೆ ಮುಗಿದಿದ್ದರೆ ನಾವು ಮತ್ತೆ ಕಸ್ಟಡಿಗೆ ಕೇಳುವ ಅನಿವಾರ್ಯತೆ ಇರಲಿಲ್ಲ. ಅಮೃತ್​ ಪೌಲ್​ ಅವರು ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದರು. ಇವರೇ ಉತ್ತರ ಹೇಳಬೇಕು ಹೇಗೆ ಟ್ಯಾಂಪರಿಂಗ್ ಆಯ್ತು ಅಂತ. ಸ್ಟ್ರಾಂಗ್ ರೂಂ ಕೀ ಇವರಿಗೆ ಗೊತ್ತಿಲ್ಲದೆ ಶಾಂತಕುಮಾರ್ ಅವರಿಗೆ ಹೇಗೆ ಹೋಯ್ತು? ಇದೆಲ್ಲವನ್ನೂ ತನಿಖೆ ಮಾಡಬೇಕು. ಹಾಗಾಗಿ ಕಸ್ಟಡಿಗೆ ನೀಡಬೇಕು ಎಂದು ನ್ಯಾಯಾಧೀಶರಿಗೆ ಮನವಿ ಸರ್ಕಾರಿ ವಕೀಲರು ಮಾಡಿದರು.

ಅಮೃತ್ ಪೌಲ್​ರನ್ನು ಮತ್ತೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯುವಂತೆ ಸೂಚಿಸಿದ ನ್ಯಾಯಾಧೀಶರು, ದಿನದಲ್ಲಿ ಗರಿಷ್ಠ 30 ನಿಮಿಷ ವೈದ್ಯರು ಹಾಗೂ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡಿದರು. ಉಳಿದ ನಾಲ್ವರು ಆರೋಪಿಗಳಾದ ಹರ್ಷ, ಶ್ರೀಧರ್, ಶಾಂತಕುಮಾರ್ ಹಾಗೂ ಶ್ರೀನಿವಾಸ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು.

ಸಬ್​ ಇನ್​ಸ್ಪೆಕ್ಟರ್​ ಹುದ್ದೆಗಳ ನೇಮಕಾತಿ ಅಕ್ರಮದ ವಹಿವಾಟು ನೇಮಕಾತಿ ವಿಭಾಗದ ಕಚೇರಿಯಲ್ಲೇ ನಡೆದಿರುವ ಅನುಮಾನ ಆರಂಭದಲ್ಲೇ ದಟ್ಟವಾಗಿತ್ತು. ಪರೀಕ್ಷೆಯಲ್ಲಿ ಅಕ್ರಮ ನಡೆದ ವೇಳೆ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರೇ ಡೀಲ್​ ಕುದುರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹಾಗಾಗಿ ಮೊದಲ ತಲೆದಂಡ ಎಂಬಂತೆ ಏ.27ರಂದೇ ಅಮೃತ್ ಪೌಲ್ ಅವರನ್ನ ಬೆಂಗಳೂರಿನ ಆಂತರಿಕ ವಿಭಾಗಕ್ಕೆ ಎತ್ತಂಗಡಿ ಮಾಡಲಾಗಿತ್ತು. ಬಳಿಕ ಇದೇ ಪ್ರಕರಣ ಸಂಬಂಧ ಈ ಹಿಂದೆ ಮೂರು ಬಾರಿ ಸಿಐಡಿ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಿದ್ದರು. ಜು.4ರಂದು ನಾಲ್ಕನೇ ಬಾರಿ ವಿಚಾರಣೆಗೆ ಹಾಜರಾದಾಗ ಸಿಐಡಿ ಬಂಧಿಸಿತ್ತು.

ಪಂಜಾಬ್​ ಮೂಲದ ಅಮೃತ್​ ಪೌಲ್​, 1995ರ ಬ್ಯಾಚ್​ನ ಐಪಿಎಸ್ ಅಧಿಕಾರಿ. 2000-2003ರ ವರೆಗೆ ಉಡುಪಿ ಎಸ್​ಪಿ ಆಗಿ ಕಾರ್ಯ ನಿರ್ವಹಿಸಿದ್ದರು. 2014ರಲ್ಲಿ ಕರ್ನಾಟಕ ವೆಸ್ಟರ್ನ್ ರೇಂಜ್ ಐಜಿಯಾಗಿ ಕೆಲಸ ಮಾಡಿದ ಅಮೃತ್ ಪೌಲ್, 2018ರಲ್ಲಿ ಸೆಂಟ್ರಲ್ ರೇಂಜ್ ಐಜಿಯಾಗಿ ನೇಮಕವಾದರು. 2019ರಲ್ಲಿ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ಬಡ್ತಿ ಹೊಂದಿದ್ದರು. ಕರ್ನಾಟಕದ ನೇಕಾತಿಯ ಸಂಪೂರ್ಣ ಜವಾಬ್ದಾರಿ ಇವರದ್ದೇ ಆಗಿತ್ತು. ಒಎಂಆರ್ ಶೀಟ್ ಕೊಠಡಿ ಕೀ ಇವರ ಉಸ್ತುವಾರಿಯಲ್ಲೇ ಇತ್ತು. 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿನ ಅಕ್ರಮ ಪ್ರಕರಣದಲ್ಲಿ ಅಮೃತ್ ಪೌಲ್ ಹೆಸರು ಕೇಳಿ ಬಂದಿತ್ತು. ಪ್ರಕರಣದಲ್ಲಿ ಹೆಸರು ಕೇಳಿಬಂದ ಬೆನ್ನಲ್ಲೇ ಇವರನ್ನ ಎತ್ತಂಗಡಿ ಮಾಡಲಾಗಿತ್ತು.

ನೇಮಕಾತಿ ವಿಭಾಗದ ಹಲವು ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿಯಾಗಿದ್ದಾರೆ ಎಂಬುದು ಗೊತ್ತಾದ ಬೆನ್ನಲ್ಲೇ ಕೆಲ ಅಧಿಕಾರಿಗಳನ್ನ ಸಿಐಡಿ ಬಂಧಿಸಿದೆ. ಇದೀಗ ಅಮೃತ್​ ಪೌಲ್​ ಅವರನ್ನೂ ಬಂಧಿಸಿದ್ದು, ಏಜೆಂಟ್​ಗಳ ಮತ್ತು ಇವರ ನಡುವಿನ ಸಂಬಂಧ, ಒಎಂಆರ್ ಶೀಟ್ ಟ್ಯಾಂಪರಿಂಗ್‌ ಹೇಗಾಯಿತು? ಎನ್ನುವುದರ ಬಗ್ಗೆ ತನಿಖೆಯಲ್ಲಿ ಬಯಲಾಗಬೇಕಿದೆ.

ಹೇಗೆ ನಡೆದಿದೆ ಅಕ್ರಮ: ಕೆಲಸಕ್ಕೆ ಅರ್ಜಿ ಆಹ್ವಾನಿಸಿದ ಬಳಿಕ ಅಭ್ಯರ್ಥಿಗಳಿಂದ ಏಜೆಂಟ್​ಗಳು ಡೀಲ್​ ಕುದುರಿಸಿದ್ದಾರೆ. ನಂತರ ರಾಜಕೀಯ ಮುಖಂಡರು, ಅಧಿಕಾರಿಗಳ ಮುಖೇನ ಅಕ್ರಮ ಎಸಗಿದ್ದಾರೆ. ಪರೀಕ್ಷೆಗೂ ಒಂದು ದಿನ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವ ಜತೆಗೆ, ಡೀಲ್​ ಕುದುರಿಸಿದ ನಂತರ ಅಭ್ಯರ್ಥಿಗಳು ಬರೆದ ಒಎಂಆರ್​ ಶೀಟ್​ಗಳನ್ನು ಅಧಿಕಾರಿಗಳ ಕಚೇರಿಯಲ್ಲೇ ತಿದ್ದಿರುವುದಕ್ಕೆ ಸಿಐಡಿಗೆ ಪ್ರಾಥಮಿಕ ಸಾಕ್ಷ್ಯಾಧಾರ ಸಿಕ್ಕಿದೆ.

ಬಂಧನಕ್ಕೆ ಒಳಪಟ್ಟಿರುವ ಅಭ್ಯರ್ಥಿಗಳು ವಿಚಾರಣೆ ಸಂದರ್ಭದಲ್ಲಿ ನೇಮಕಾತಿ ವಿಭಾಗದಲ್ಲಿರುವ ಕೆಲ ಹಿರಿಯ ಪೊಲೀಸ್​ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳು ಮತ್ತು ಅವರ ಪುತ್ರರ ಹೆಸರನ್ನು ಹೇಳಿದ್ದರು. ಅಭ್ಯರ್ಥಿಗಳ ಹೇಳಿಕೆ ಆಧರಿಸಿ ತನಿಖೆ ಮುಂದುವರಿದಿದೆ. ಅಭ್ಯರ್ಥಿಗಳಿಂದ ತೆಗೆದುಕೊಂಡಿರುವ ಒಎಂಆರ್​ ಶೀಟ್​ ಕಾರ್ಬನ್​ ಪ್ರತಿಯಲ್ಲಿರುವ ಪ್ರಶ್ನೆಗಳ ಉತ್ತರಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಮೂಲ ಉತ್ತರ ಪತ್ರಿಕೆಯಲ್ಲಿ ಉತ್ತರ ತಿದ್ದಿರುವುದು ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net