

ಉಪ್ಪಿನಂಗಡಿ: ಪದೇಪದೆ ದುರಸ್ತಿ ಕಾರ್ಯ ತಪ್ಪಿಸುವುದಕ್ಕಾಗಿ ಹಾಗೂ ದೀರ್ಘಕಾಲಿಕ ಬಾಳಿಕೆಗಾಗಿ ರಸ್ತೆಗೆ ಡಾಂಬರೀಕರಣದ ಬದಲು ಕಾಂಕ್ರೀಟ್ ಕಾಮಗಾರಿ ಮಾಡಲಾಗುತ್ತಿದೆ. ಆದರೆ ಅಂತಹ ಕಾಂಕ್ರೀಟ್ ರಸ್ತೆಯೂ ಕಳಪೆಯಾದರೆ?. ಉಪ್ಪಿನಂಗಡಿಯ ನಟ್ಟಿಬೈಲು ರಾಮನಗರ ಸಂಪರ್ಕ ಕಾಂಕ್ರಿಟ್ ರಸ್ತೆಯ ದುಸ್ಥಿತಿಯ ಕಥೆ ಇದು. 8 ವರ್ಷಗಳ ಹಿಂದೆ ಅಂದಿನ ಶಾಸಕಿ ಶಕುಂತಳಾ ಶೆಟ್ಟಿ ಒದಗಿಸಿದ ಅನುದಾನದಲ್ಲಿ ನಡೆದ ಈ ಕಾಂಕ್ರೀಟ್ ಕಾಮಗಾರಿ ಬಗ್ಗೆ ಸ್ಥಳೀಯರಿಗೆ ಆಗಲೇ ಸಂಶಯವಿತ್ತ್ತು. ಹಾಗಾಗಿಯೇ ಅದರ ಬಗ್ಗೆ ಕಾಳಜಿವಹಿಸಿ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆದ ನಿಗದಿತ ಅವಧಿಯಲ್ಲಿ ಯಾವೊಂದು ವಾಹನವೂ ಅದರಲ್ಲಿ ಸಂಚರಿಸದಂತೆ ಸ್ಥಳೀಯರು ಮುನ್ನೆಚ್ಚರಿಕೆ ವಹಿಸಿದ್ದರು. ಮಾತ್ರವಲ್ಲದೆ ದಿನವೂ ನೀರುಣಿಸಿ ಕಾಂಕ್ರೀಟ್ ರಸ್ತೆ ಗಟ್ಟಿಯಾಗುವಂತೆ ನೋಡಿಕೊಂಡಿದ್ದರು. ಆದರೆ ಕಾಮಗಾರಿ ಕಳಪೆಯಾಗಿರುವ ಕಾರಣ 6 ತಿಂಗಳಾಗುತ್ತಿದ್ದಂತೆಯೇ ಬಿರುಕು, ರಸ್ತೆಯ ಮೇಲ್ಪದರ ಕರಗತೊಡಗಿ ಕಳಪೆ ಕಾಮಗಾರಿಗೆ ಸಾಕ್ಷಿ ಒದಗಿಸಿತ್ತು. ಕಾಮಗಾರಿಯ ಕಳಪೆ ಗುಣಮಟ್ಟದ ಬಗ್ಗೆ ಪತ್ರಿಕಾ ವರದಿ ಪ್ರಕಟವಾದಾಗ ಎಚ್ಚೆತ್ತ ಗುತ್ತಿಗೆದಾರ ಅದರ ಮೇಲೊಂದು ಸಿಮೆಂಟ್ ಕೋಟಿಂಗ್ ಹಾಕಿ ಧ್ವನಿಯೆತ್ತಿದ ಬಾಯಿಯನ್ನು ಸಮಾಧಾನಿಸಿದ್ದ. ಆದರೆ ದಿನ ಉರುಳಿದಂತೆ ರಸ್ತೆ ನಿಧಾನಗತಿಯಲ್ಲಿ ಕರಗತೊಡಗಿದ್ದು, ರಸ್ತೆಯಂಚಿನಲ್ಲಿ ಕಾಂಕ್ರೀಟ್ ತುಂಡರಿಸತೊಡಗಿ ಈ ಭಾಗದ ಸಂಚಾರವೇ ದುಸ್ತರವಾಗುವಂತಾಗಿದೆ. ಕಳಪೆ ಕಾಮಗಾರಿಯ ಬಗ್ಗೆ ಸಕಾಲದಲ್ಲಿ ಎಚ್ಚರಿಸಿದ್ದರೂ ಆಡಳಿತ ವ್ಯವಸ್ಥೆ ದಿವ್ಯಮೌನ ತಾಳುವುದು ಒಟ್ಟು ಕಾಮಗಾರಿ ನಡೆಯುವುದು ಸಮಾಜದ ಹಿತಕ್ಕಿಂತ ಮುಖ್ಯ ಗುತ್ತಿಗೆದಾರರ ಹಿತ ಕಾಯುವಂತಿದೆ. ಇದೇ ರಸ್ತೆಯ ಉಳಿದ ಭಾಗವನ್ನು ಸ್ಥಳೀಯ ಗುತ್ತಿಗೆದಾರರು ನಿರ್ಮಿಸಿದ್ದು, ಈತನಕ ಸುಸ್ಥಿಯಲ್ಲಿದೆ. ಇಡೀ ರಸ್ತೆಯ ಗುತ್ತಿಗೆ ಹೊಣೆಯನ್ನು ಹೊರಭಾಗದ ಮಂದಿ ನಿರ್ವಹಿಸಿದ್ದಲ್ಲಿಯೇ ಕಳಪೆಯ ಲೋಪ ಕಾಣಿಸಿರುವುದು ಇಲ್ಲಿ ಗಮನಿಸಬೇಕಾದ ಅಂಶ. ಗುತ್ತಿಗೆದಾರನಿಂದಲೇ ನಷ್ಟ ವಸೂಲಿ ಮಾಡಲಿ ಶಾಲಾ ವಾಹನಗಳೂ ಸಂಚರಿಸುವ ಈ ರಸ್ತೆಯನ್ನು ದೀರ್ಘಕಾಲ ಬಾಳಿಕೆ ಬರುವಂತೆ ಸರ್ಕಾರ ಅನುದಾನ ಒದಗಿಸಿ ರಸ್ತೆಯನ್ನು ಕಾಂಕ್ರೀಟ್ ಕಾಮಗಾರಿ ಮಾಡುತ್ತಿದ್ದರೆ ಅದು ಇಷ್ಟು ಬೇಗ ಈಮಟ್ಟದಲ್ಲಿ ಹಾಳಾಗಿರುವ ಬಗ್ಗೆ ಬೇಸರ ಮೂಡಿದೆ. ಈಮಟ್ಟದ ಕಳಪೆ ಕಾಮಗಾರಿಯನ್ನು ನಡೆಸಿದ ಗುತ್ತಿಗೆದಾರನಿಂದಲೇ ನಷ್ಟ ವಸೂಲಿ ಮಾಡುವ ವ್ಯವಸ್ಥೆ ಬರಬೇಕು. ಪ್ರಸಕ್ತ ವಾಹನ ಸಂಚಾರ ಸುಗಮವಾಗಿಸುವ ನಿಟ್ಟಿನಲ್ಲಿ ಪಂಚಾಯಿತಿ ಅನುದಾನ ಬಳಸಿ ಈ ರಸ್ತೆಯ ಕೆಟ್ಟು ಹೋದ ಭಾಗದಲ್ಲಿ ಮರುಡಾಂಬರೀಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ಈ ಭಾಗದ ಪಂಚಾಯಿತಿ ಸದಸ್ಯ ಧನಂಜಯ್ ನಟ್ಟಿಬೈಲು ಪ್ರತಿಕ್ರಿಯಿಸಿದ್ದಾರೆ.
ಶಾಸಕರ ಅನುದಾನದಲ್ಲಿ ಈ ಭಾಗದ ರಸ್ತೆ ನಿರ್ಮಾಣ ಕಾರ್ಯವನ್ನು ಪುತ್ತೂರಿನ ಉಸ್ಮಾನ್ ಎಂಬ ಗುತ್ತಿಗೆದಾರ ನಿರ್ವಹಿಸಿದ ಬಗ್ಗೆ ಪಂಚಾಯಿತಿ ದಾಖಲೆಯಲ್ಲಿದೆ. ರಸ್ತೆ ಪ್ರಸಕ್ತ ಅಪಾಯಕಾರಿಯಾಗಿರುವುದರಿಂದ ಪಂಚಾಯಿತಿ ವತಿಯಿಂದಲೇ ರಸ್ತೆಯನ್ನು ದುರಸ್ತಿಗೊಳಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಲಾರೆನ್ಸ್ ವಿಫ್ರೆಡ್ ರೋಡ್ರಿಗಸ್, ಸ್ಥಳೀಯ ಪಿಡಿಒ