

ತುಮಕೂರು: ಪಾವಗಡ ತಾಲೂಕಿನ ಪಳವಳ್ಳಿ ಕೆರೆ ಬಳಿ ಖಾಸಗಿ ಬಸ್ ದುರಂತ ನಡೆದ ಬಳಿಕ ಎಚ್ಚೆತ್ತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವೈ.ಎನ್.ಹೊಸಕೋಟೆಯಿಂದ ಪಾವಗಡಕ್ಕೆ 7 ಗ್ರಾಮೀಣ ಸಾರಿಗೆ ಬಸ್ಗಳ ಸಂಚಾರ ಆರಂಭಿಸಿದೆ.
ಪಾವಗಡ ತಾಲೂಕು ಕೆಎಸ್ಆರ್ಟಿಸಿ ನಿಗಮದಿಂದ ವೈ.ಎನ್. ಹೊಸಕೋಟೆ ಹೋಬಳಿಗೆ 7 ಸಾರಿಗೆ ಬಸ್ಗಳು ಭಾನುವಾರದಿಂದ ಸಂಚಾರ ಆರಂಭಿಸಿವೆ. ಈ ಹಿಂದೆ ತುಮಕೂರು ಘಟಕ ಇದ್ದಾಗ 200 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. 60 ಬಸ್ಗಳು ಸಂಚರಿಸುತ್ತಿದ್ದವು. ಪ್ರಸ್ತುತ 123 ಸಿಬ್ಬಂದಿ ಕೆಲಸ ಮಾಡುತ್ತಿದ್ದು, 43 ಬಸ್ಗಳು ಮಾತ್ರ ಸಂಚರಿಸುತ್ತಿವೆ. ಗ್ರಾಮೀಣ ಸಾರಿಗೆ ಸೇವೆ ಕಡಿತಗೊಳಿಸಲಾಗಿದೆ. ತುಮಕೂರಿನಿಂದ ಈಗ ಚಿತ್ರದುರ್ಗ ಘಟಕಕ್ಕೆ ಸೇರಿದೆ ಎಂದು ಡಿಪೋ ಮಾನೇಜರ್ ಹನುಮಂತರಾಯಪ್ಪ 'ವಿಜಯವಾಣಿ'ಗೆ ಮಾಹಿತಿ ನೀಡಿದ್ದಾರೆ.
ಖಾಸಗಿ ಬಸ್ ಅಪಘಾತದಲ್ಲಿ 6 ಜನ ಮೃತಪಟ್ಟಿದ್ದಾರೆ. ಈ ದುರಂತದ ಬಳಿಕ ಪಾವಗಡದಿಂದ ವೈ.ಎನ್. ಹೊಸಕೋಟೆ ಮಾರ್ಗದಲ್ಲಿ ಸಾಕಷ್ಟು ಸಾರಿಗೆ ಬಸ್ಗಳ ಸಂಚಾರ ಓಡಾಟ ಆರಂಭವಾಗಿದೆ. ಈ ಬಸ್ ಸೇವೆ ನಿರಂತರವೋ ಆಥವಾ ತಾತ್ಕಾಲಿಕವೋ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ವೈ.ಎನ್.ಹೊಸಕೋಟೆಯ ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.